ಗ್ಯಾಸ್ ಪೈಪ್‌ಲೈನ್ ಕಂಪನಿ ವಿರುದ್ಧ ಕ್ರಮ ಜರುಗಿಸಿ; ಡಿಸಿಗೆ ಜಯ ಕರ್ನಾಟಕ ಸಂಘಟನೆ ಆಗ್ರಹ

Gas Pipeline
Published on

ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಸುವ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಂಪನಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಗುರುವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರಗೆ ಮನವಿ ಪತ್ರ ಸಲ್ಲಿಸಿರುವ ಸಂಘಟನೆಯ ಪದಾಧಿಕಾರಿಗಳು, ಚನ್ನೈ ಮೂಲದ ಎಜಿಪಿ ಪ್ರಥಮ ಸಿಟಿ ಗ್ಯಾಸ್ ಕಂಪನಿಯವರು ನಗರ ಸೇರಿದಂತೆ ವಿವಿಧೆಡೆ ನಡೆಸಿರುವ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಚೆನ್ನಾಗಿರುವ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆಯುತ್ತಿದ್ದಾರೆ. ನಂತರ ಜಲ್ಲಿ ಕಲ್ಲು, ಮನ್ಣು ಹಾಕಿ ಹೋಗುತ್ತಿದ್ದಾರೆ. ಮಳೆ ಬಂದಾಗ ಕೆಸರು, ಬಿಸಿಲು ಬಂದಾಗ ಧೂಳು ಸೃಷ್ಟಿಯಾಗುತ್ತಿದೆ.
ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ವಾಹನ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಇದರಿಂದಾಗಿ ಹಲವು ಅಪಘಾತಗಳೂ ಸಂಭವಿಸಿವೆ. ಹಲವು ಪ್ರಯಾಣಿಕರು, ಸವಾರರು ಗಾಯಗೊಂಡಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ ಪತ್ರಿಕೆ ವಿಶೇಷ ವರದಿ ಮಾಡಿದೆ. ಸಾರ್ವಜನಿಕರು ಹಲವು ಬಾರಿ ಪಿಡಬ್ಲೂೃಡಿ ಹಾಗೂ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪರವಾನಿಗೆ ಪತ್ರವನ್ನೂ ತೋರಿಸುವುದಿಲ್ಲ. ಎಲ್ಲರೂ ಹಾರಿಕೆ ಉತ್ತರ ನೀಡುತ್ತಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸದರ ಕಾಮಗಾರಿಯನ್ನು ವೀಕ್ಷಣೆ ಮಾಡಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಬೇಕು. ಕಂಪನಿ ಹಾಗೂ ನಿರ್ಲಕ್ಷೃ ತೋರಿದ ಪಿಡಬ್ಲೂೃಡಿ, ನಗರಸಭೆ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ, ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರ, ಶಿವಣ್ಣ ಹೂಗಾರ, ಸತೀಶ ಮಡಿವಾಳರ, ಮಾಲತೇಶ ಬಜ್ಜಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net