ಗ್ಯಾಸ್ ಪೈಪ್‌ಲೈನ್ ಗುಂಡಿಗಳಿಗಿಲ್ಲ ಮುಕ್ತಿ; ಪಿಬಿ ರಸ್ತೆಯಲ್ಲಿ ಮತ್ತೊಂದು ಲಾರಿ ಸಿಲುಕಿ ಪರದಾಟ; ಮಧ್ಯರಾತ್ರಿ ಕದ್ದುಮುಚ್ಚಿ ಕಾಮಗಾರಿ

6 HVR 4 D
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ನಗರದಾದ್ಯಂತ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ ಮಾಡುವ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ನಿಯಮ ಮೀರಿ ಮಧ್ಯರಾತ್ರಿ ಕದ್ದುಮುಚ್ಚಿ ಕಾಮಗಾರಿ ಮಾಡುತ್ತಿದ್ದು, ಇದರಿಂದ ನಗರದ ಸುಂದರವಾದ ರಸ್ತೆಗಳು ಗುಂಡಿ, ಕೆಸರಿನಿಂದ ಕೂಡಿ ಹಾಳಾಗಿವೆ. ಪದೇಪದೆ ವಾಹನಗಳು ಗುಂಡಿಯಲ್ಲಿ ಸಿಲುಕಿ ಒದ್ದಾಡುತ್ತಿವೆ.
ಇತ್ತೀಚೆಗಷ್ಟೇ ಪ್ರವಾಸಿ ಮಂದಿರದ ಎದುರು ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮಾಡಿದ್ದ ಸ್ಥಳದಲ್ಲಿ ಲಾರಿಯೊಂದು ಸಿಲುಕಿಕೊಂಡಿತ್ತು. ಗುರುವಾರ ಶಹರ ಠಾಣೆ ಬಳಿ ಕಾಮಗಾರಿ ನಡೆದ ಸ್ಥಳದಲ್ಲಿ ಪಿಬಿ ರಸ್ತೆಯಲ್ಲಿ ಮಹಾರಾಷ್ಟ್ರ ಮೂಲದ ಮತ್ತೊಂದು ಟ್ರಕ್ ಸುಮಾರು ಎರಡು ಅಡಿ ಆಳಕ್ಕೆ ಸಿಲುಕಿಕೊಂಡಿತ್ತು. ಕಂಪನಿಯವರು ಕ್ರೇನ್ ತಂದು ಒಂದು ತಾಸು ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದರು. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಯಾವಾಗ ಮುಕ್ತಿ ಎಂದು ಹಾವೇರಿ ಜನ ಪ್ರಶ್ನಿಸುತ್ತಿದ್ದಾರೆ.
ಚೆನ್ನೈ ಮೂಲದ ಎಜಿಪಿ ಪ್ರಥಮ ಸಿಟಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾವೇರಿ ನಗರದ 15,000 ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಸುವ ಕಾಮಗಾರಿ ಎತ್ತಿಕೊಂಡಿದೆ. ಇದಕ್ಕಾಗಿ ನಗರದ ಹಳೇ ಪಿಬಿ ರಸ್ತೆ, ಗುತ್ತಲ ರಸ್ತೆ, ಹಾವೇರಿ- ದೇವಗಿರಿ ರಸ್ತೆ, ವಿದ್ಯಾನಗರ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ಎಲ್ಲೆಂದರಲ್ಲಿ ಗುಂಡಿ ತೋಡಿ, ಜಲ್ಲಿಕಲ್ಲು, ಮಣ್ಣು ಹಾಕಿ ನಾಪತ್ತೆಯಾಗುತ್ತಿದ್ದಾರೆ. ರಸ್ತೆ ಸರಿಪಡಿಸುವುದನ್ನೇ ಮರೆತಿದ್ದಾರೆ. ಇದು ವಾಹನ ಸವಾರರು, ಪಾದಚಾರಿಗಳ ಸಂಕಷ್ಟಕ್ಕೆ ಕಾರಣವಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಪಿಬಿ ರಸ್ತೆ, ಗುತ್ತಲ ರಸ್ತೆ, ಸೇರಿ ಇತರ ರಸ್ತೆಗಳಲ್ಲಿ ಕಾಮಗಾರಿ ಮಾಡಲು ಅನುಮತಿ ಪಡೆದಿದ್ದಾರೆ. ಆದರೆ, ಮಳೆಗಾಲದಲ್ಲಿ ಕಾಮಗಾರಿ ಮಾಡದಂತೆ ಹಾಗೂ ಗುಂಡಿ ತೋಡಿದ ಜಾಗದಲ್ಲಿ ಮೊದಲಿದ್ದಂತೆ ಉತ್ತಮ ಗುಣಮಟ್ಟದ ರಸ್ತೆ, ಪಾದಚಾರಿ ಮಾರ್ಗ ಮಾಡುವಂತೆ ಲೋಕೋಪಯೋಗಿ ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ. ಸದ್ಯ ಮಳೆಗಾಲ ಇರುವ ಕಾರಣ ಕಾಮಗಾರಿ ಬಂದ್ ಮಾಡುವಂತೆ ಲೋಕೋಪಯೋಗಿ ಇಲಾಖೆ ಹಲವು ಬಾರಿ ಸೂಚಿಸಿದರೂ ಗ್ಯಾಸ್ ಕಂಪನಿಯವರು ಕೆಲಸ ಬಂದ್ ಮಾಡುತ್ತಿಲ್ಲ. ರಾತ್ರೋರಾತ್ರಿ ಗುಂಡಿ ಅಗೆಯುವ ಕೆಲಸ ಮುಂದುವರಿಸಿದ್ದಾರೆ.
ಒಂದು ಕಿಮೀ ನಿರ್ದಿಷ್ಟವಾದ ಜಾಗ ಗುರುತಿಸಿ ಆ ಭಾಗದಲ್ಲಿ ಗುಂಡಿ ತೋಡಿ ಪೈಪ್ ಅಳವಡಿಸಿದ ನಂತರ ಆ ರಸ್ತೆಯನ್ನು ಮೊದಲಿದ್ದಂತೆ ಸರಿಪಡಿಸಿದ ನಂತರ ಬೇರೆಡೆ ಕಾಮಗಾರಿ ಮಾಡಿದರೆ ಸಮಸ್ಯೆ ಇರುವುದಿಲ್ಲ. ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡುತ್ತಾರೆ. ಅದನ್ನು ಬಿಟ್ಟು ಗುಂಡಿ ತೋಡಿ ಕಲ್ಲು, ಮಣ್ಣು ಹಾಕಿ ತಿಂಗಳು, ಎರಡು ತಿಂಗಳು ಕೈಬಿಟ್ಟರೆ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ರುದ್ರಪ್ಪ ಲಮಾಣಿ ಅವರು ಗಮನ ಹರಿಸಬೇಕಿದೆ. ಸಮಸ್ಯೆಗೆ ಮುಕ್ತಿ ಹೇಳಬೇಕಿದೆ.
ಪ್ರಭಾವಿಗಳ ಅಭಯ
ನಿಯಮ ಮೀರಿ ಮಳೆಗಾಲದಲ್ಲೂ ಗುಂಡಿ ತೋಡಲು ಕಂಪನಿಯವರಿಗೆ ಕೆಲ ಪ್ರಭಾವಿ ವ್ಯಕ್ತಿಗಳು ಅಭಯ ನೀಡುತ್ತಿದ್ದಾರೆ. ಹೀಗಾಗಿ, ಮಳೆ, ಗಾಳಿ ಏನೇ ಇರಲಿ ಯಾರಿಗೂ ಹೆದರದೆ ಗುತ್ತಿಗೆದಾರರು ಕಾಮಗಾರಿ ಮಾಡುತ್ತಿದ್ದಾರೆ. ಗುಂಡಿ ಅಗೆದು ಸರಿಯಾಗಿ ಮುಚ್ಚದೇ ಕಾಮಗಾರಿ ಮಾಡುತ್ತಿದ್ದಾರೆ ಎನ್ನುತ್ತಾರೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರು.
ಹತ್ತಾರು ಸಮಸ್ಯೆ
ಈ ಕಾಮಗಾರಿಯಿಂದ ಒಂದೆರೆಡು ಸಮಸ್ಯೆ ಉಂಟಾಗಿಲ್ಲ. ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳಿಗೂ ಹಲವೆಡೆ ದಕ್ಕೆ ಉಂಟಾಗಿದೆ. ಈ ಹಿಂದೆ ಬಸವೇಶ್ವರ ನಗರದ ಕೆಲ ಮನೆಗಳಿಗೆ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣಗೊಂಡಿತ್ತು. ಗುಂಡಿ ಸರಿಯಾಗಿ ಮುಚ್ಚದ ಕಾರಣ ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳು ವಾಹನ ಸವಾರರಿಗೆ ಉಚಿತವಾಗಿ ಸಿಗುತ್ತಿದೆ.

ಕೋಟ್:
ಮಳೆಗಾಲದಲ್ಲಿ ಕಾಮಗಾರಿ ಮಾಡದಂತೆ ಹಾಗೂ ಮೊದಲಿದ್ದಂತೆ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯಿಂದ ಸ್ಪಷ್ಟವಾಗಿ ಸೂಚಿಸಿದ್ದರೂ ಗುತ್ತಿಗೆದಾರರು ನಿಯಮ ಪಾಲಿಸುತ್ತಿಲ್ಲ. ಮಳೆಗಾಲ ಇರುವ ಕಾರಣ ಕೆಲಸ ಬಂದ್ ಮಾಡಿಸಿದರೂ ರಾತ್ರಿ ಮತ್ತೆ ಕಾಮಗಾರಿ ಶುರು ಮಾಡುತ್ತಿದ್ದಾರೆ.
> ಎಂ.ಎಸ್.ಮೇಡ್ಲೇರಿ, ಎಇಇ, ಲೋಕೋಪಯೋಗಿ ಇಲಾಖೆ

ಕೋಟ್:
ಕರ್ಜಗಿ ರಸ್ತೆಯ ಕುಡಿಯುವ ನೀರಿನ ಪೈಪ್‌ಲೈನ್ ಡ್ಯಾಮೇಜ್ ಮಾಡಿದ್ದರು. ಆ ಲೈನ್ ಬಂದ್ ಮಾಡಿಸಿದ್ದೇವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಹಾಳಾಗಿರುವ ರಸ್ತೆಗೆ ಡಾಂಬರ್ ಹಾಕುವುದು, ಪೇವರ್ಸ್‌ ಅಳವಡಿಸುವುದು ಸೇರಿದಂತೆ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
> ಪರಶುರಾಮ ಚಲವಾದಿ, ಪೌರಾಯುಕ್ತ, ಹಾವೇರಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net