ಸಂಚಲನ ಮೂಡಿಸಿದ ಸಿಎಂ ಜಿಲ್ಲಾಮಟ್ಟದ ಸಭೆ; ಮೀಟಿಂಗ್ ಬೆನ್ನಲ್ಲೇ ಕೆಎಎಸ್ ಅಧಿಕಾರಿಗಳ ನೇಮಕ

26 HVR 3
Published on

ಹಾವೇರಿ: ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಅವರು ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳಿಗೆ ಭರ್ಜರಿ ಕ್ಲಾಸ್ ತೆಗೆದುಕೊಂಡ ಪರಿಣಾಮ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಇದೀಗ ಜಿಲ್ಲಾಡಳಿತದ ಕೆಲಸಗಳು ಚುರುಕುಗೊಂಡಿದ್ದು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದನೆ ದೊರೆಯುತ್ತಿದೆ.
ಸಿಎಂ ಸಭೆ ಬೆನ್ನಲ್ಲೇ ಜಿಲ್ಲೆಯಲ್ಲಿ ಖಾಲಿ ಇದ್ದ ಪ್ರಮುಖ ಎರಡು ಪ್ರಮುಖ ಹುದ್ದೆಗಳಿಗೆ ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಗಳ ನೇಮಕವಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಯೋಜನಾ ನಿರ್ದೇಶಕರಾಗಿ ಮಮತಾ ಹೊಸಗೌಡರ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಡಾ.ನಾಗರಾಜು ಎಸ್., ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಜಿಲ್ಲಾಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆ ಕಟ್ಟಡದ ಮೇಲೆ ಹೊಸ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಸೋರುತ್ತಿರುವ ಕಾರಣ ಮಂಗಳವಾರ ಸಿಎಂ ಭೇಟಿ ನೀಡಿ ಪರಿಶೀಲಿಸಿ, ಎಇಇ ಮಂಜುನಾಥ ಅವರನ್ನು ಅಮಾನತುಗೊಳಿಸಿದ್ದರು.
ಇದೀಗ ಡಿಸಿ ಭೇಟಿ ನೀಡಿ ಪರಿಶೀಲಿಸಿದರು. ಸೋರಿಕೆ ತಡೆಗಟ್ಟಲು ಕೂಡಲೇ ತಾಡಪತ್ರಿ ಅಳವಡಿಸುವಂತೆ, ಗುರುವಾರದಿಂದ ಶೀಟ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸೋರುತ್ತಿರುವ ತಾಯಿ- ಮಕ್ಕಳ ವಾರ್ಡ್‌ಗಳಲ್ಲಿನ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಸೋರಿಕೆ ನಿಲ್ಲುವವರೆಗೆ ಯಾವುದೇ ಕಾರಣಕ್ಕೂ ರೋಗಿಗಳನ್ನು ಇಲ್ಲಿ ದಾಖಲಿಸದಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಎಂ.ಹಾವನೂರಗೆ ತಾಕೀತು ಮಾಡಿದರು.
ಇತರ ಇಲಾಖೆಗಳಿಗೂ ಸಿಎಂ ಸಭೆಯ ಚುರುಕು ಮುಟ್ಟಿದ್ದು, ಬಾಕಿ ಕಡತಗಳ ವಿಲೇವಾರಿ, ಹಳೇ ಕಡತಗಳ ಪರಿಶೀಲನೆ ಕಾರ್ಯ ವೇಗ ಪಡೆದಿದೆ. ನಿದ್ರೆಯಲ್ಲಿದ್ದ ಕೆಲ ಅಧಿಕಾರಿ, ಸಿಬ್ಬಂದಿ ಎಚ್ಚರಗೊಂಡಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಸಿಎಂ ಸೂಚನೆಯಂತೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಶಿಕ್ಷಣದಲ್ಲಿ ಜಿಲ್ಲೆ ಪ್ರಗತಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಗಾ ವಹಿಸುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಉಸ್ತುವಾರಿ ಸಚಿವ ಪಾಟೀಲರ ಕಾರ್ಯಕ್ಕೆ ಶ್ಲಾಘನೆ
ಕಳೆದ ತಿಂಗಳು ಮೊದಲ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಸಿದ್ದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಜಿಲ್ಲೆಯ ಭಯಾನಕ ಸ್ಥಿತಿಗತಿಯ ಇಂಚಿಂಚು ಮಾಹಿತಿ ಸಿಕ್ಕಿತ್ತು. ವಿವಿಧ ಇಲಾಖೆಗಳ ಕಾರ್ಯವೈಖರಿ, ಅವ್ಯವಸ್ಥೆ ಕಂಡು ಸಚಿವರೇ ದಂಗಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ ಬಳಿ ತೆರಳಿ ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸುವಂತೆ ಒಕ್ಕೊರಲ ಮನವಿ ಮಾಡಿದ್ದರು. ಈ ನಡುವೆ ರೈತ ಆತ್ಮಹತ್ಯೆ ಹಾಗೂ ಹಾವೇರಿ ಮೆಡಿಕಲ್ ಕಾಲೇಜು ವಿಚಾರ ಸದ್ದು ಮಾಡಿದ್ದರಿಂದ ಸಿಎಂ ಅವರನ್ನು ಜಿಲ್ಲೆಗೆ ಕರೆಸಲು ಯಶಸ್ವಿಯಾದರು. ಸಚಿವರ ಈ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net