ಪಿಂಚಣಿ ಸೌಲಭ್ಯಕ್ಕೆ ಆಧಾರ್ ಲಿಂಕ್‌ಮಾಡಿಸಲು ಸೂಚನೆ

Published on

ಹಾವೇರಿ: ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯವೇತನ, ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ, ಮನಸ್ವಿನಿ, ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಪಿಂಚಣಿ ಜಮೆಯಾಗುವ ಬ್ಯಾಂಕ್ ಖಾತೆಗೆ ಅಥವಾ ಪೋಸ್ಟ್ ಆಫೀಸ್ ಪಾಸ್ ಬುಕ್‌ಗೆ ಕಡ್ಡಾಯವಾಗಿ ಜೂ.31ರೊಳಗಾಗಿ ಆಧಾರ್ ಲಿಂಕ್ ಮಾಡಿಸಬೇಕು ಎಂದು ಹಾವೇರಿ ತಹಶೀಲ್ದಾರ ಗಿರೀಶ ಸ್ವಾದಿ ತಿಳಿಸಿದ್ದಾರೆ.
ಕೆಲವೊಂದು ತಾಂತ್ರಿಕ ಕಾರಣಗಳಿಂದ ಆಧಾರ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ. ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ನಿಮ್ಮ ಪೋಸ್ಟ್ ಆಫೀಸ್‌ನಲ್ಲಿ ಮತ್ತು ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳ ಬಳಿ ಸಿಗುತ್ತದೆ.
ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿಲ್ಲ, ಎನ್‌ಪಿಸಿಐಗೆ ಆಧಾರ್ ನಂಬರ ಲಿಂಕ್ ಆಗಿಲ್ಲ ಹಾಗೂ ಆಧಾರ್ ನಂಬರ್ ಚಾಲ್ತಿ ಇಲ್ಲ ಎಂಬ ಮೂರು ರೀತಿಯ ಪಟ್ಟಿಗಳಿರುತ್ತವೆ. ಜೂ.31ರ ಒಳಗಾಗಿ ನಿಮ್ಮ ಪಿಂಚಣಿ ಜಮೆಯಾಗುವ ಬ್ಯಾಂಕ್‌ಗೆ, ಪೋಸ್ಟ್ ಆಫೀಸ್‌ಗೆ ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಪೋಸ್ಟ್ ಪಾಸ್ ಬುಕ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಈ ಮೂರು ದಾಖಲೆಗಳನ್ನು ತೆಗೆದುಕೊಂಡು ಹೋಗಿ ಆಧಾರ್ ನಂಬರ್ ಲಿಂಕ್ ಮಾಡಿಸಬೇಕು. ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ಪಡೆಯಲು ತಾಂತ್ರಿಕ ತೊಂದರೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net