

ಹಾವೇರಿ: ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ನೀಡಿರುವ ಕೈಪಿಡಿಯೇ ಅಂತಿಮವಾಗಿದೆ. ಆಯೋಗದ ಮಾರ್ಗಸೂಚಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಧೈರ್ಯ, ದಕ್ಷತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ನಗರದ ಹುಕ್ಕೇರಿಮಠ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಚುನಾವಣೆ ಕಾರ್ಯಕ್ಕೆ ನಿಯೋಜನೆಯಾದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿ ಚುನಾವಣೆ ನಡೆಸಬೇಕು ಎಂದರು.
ಮತದಾನ ಕೊಠಡಿಯಲ್ಲಿ ಮತಯಂತ್ರಗಳ ನಿರ್ವಹಣೆ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ವಿವಿಪ್ಯಾಟ್‌ಗಳನ್ನು ಕಿಟಕಿಯ ಪಕ್ಕ ಇಡದೆ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಯಾವುದೇ ಹಿಂಜರಿಕೆ ಇಲ್ಲದೆ ಧೈರ್ಯವಾಗಿ ಕರ್ತವ್ಯನಿರ್ವಹಿಸುವ ಜತೆಗೆ ನಿಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಎಂ.ಬೇವಿನಮರದ ಹಾಗೂ ಎಸ್.ವಿ.ಅಜಗೊಂಡ್ರ ಮತದಾನ ಪ್ರಕ್ರಿಯೆ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಪ್ರಕ್ರಿಯೆ, ಮತ್ತಿತರ ವಿಷಯಗಳ ಕುರಿತು ತರಬೇತಿ ನೀಡಿದರು.
ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಚ್.ಬಿ.ಚನ್ನಪ್ಪ, ಹಾವೇರಿ ತಹಸೀಲ್ದಾರ ನಾಗರಾಜ, ತರಬೇತಿ ಉಸ್ತುವಾರಿ ಅಧಿಕಾರಿಗಳಾದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ ಹಾಗೂ ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಆಯಾ ತಾಲೂಕುಗಳು ತಹಸೀಲ್ದಾರರು, ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
ತರಬೇತಿ ಕೇಂದ್ರಗಳಿಗೆ ಭೇಟಿ:
ಬ್ಯಾಡಗಿ, ರಾಣೆಬೆನ್ನೂರ, ಹಿರೇಕೆರೂರ, ಹಾನಗಲ್ಲ, ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಇಡಿಸಿ ಹಾಗೂ ಅಂಚೆ ಮತಪತ್ರ ವಿತರಣೆ ಹಾಗೂ ಸಿಬ್ಬಂದಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಗಳ ಕುರಿತಂತೆ ಎಡಿಸಿ ವೀರಮಲ್ಲಪ್ಪ ಪರಿಶೀಲನೆ ನಡೆಸಿದರು.