ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಪರೀಕ್ಷೆ ಆ.27ಕ್ಕೆ; ಪಾರದರ್ಶಕ, ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಎಡಿಸಿ ವೀರಮಲ್ಲಪ್ಪ ಸೂಚನೆ

21 HVR 5
Published on

ಹಾವೇರಿ: ಕರ್ನಾಟಕ ಲೋಕಸೇವಾ ಆಯೋಗದಿಂದ 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಆ.27ರಂದು ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಈ ವೇಳೆ ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು ಎಂದು ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಪರೀಕ್ಷೆ ಹಿನ್ನೆಲೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪರೀಕ್ಷಾ ಮಾರ್ಗಸೂಚಿಗಳು, ಕೊಠಡಿ ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು, ತ್ರಿಸದಸ್ಯ ಸಮಿತಿ ಸದಸ್ಯರಿಗೆ, ವೀಕ್ಷಕರ ಕರ್ತವ್ಯ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾರ್ಗಸೂಚಿಗಳನ್ನು ವಿವರಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ನಿಯಮಗಳ ಪಾಲನೆ ಮೂಲಕ ಪರೀಕ್ಷೆ ನಡೆಸಬೇಕು ಎಂದರು.
ಪರೀಕ್ಷೆಗೆ ನಿಯೋಜಿತ ಮೇಲ್ವಿಚಾರಕರು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಲಾಟರಿ ಮೂಲಕ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದ ಅವರು, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲೇ ಪ್ರಶ್ನೆ ಪತ್ರಿಕೆ ತೆರೆಯುದು ಹಾಗೂ ಉತ್ತರ ಪತ್ರಿಕೆ ಬಂಡಲ್ ಮಾಡಬೇಕು ಎಂದು ಸೂಚನೆ ನೀಡಿದರು.
200 ಮೀಟರ್ ಪ್ರದೇಶ ನಿಷೇಧ:
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ವಸ್ತ್ರ ಸಂಹಿತೆ:
ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಉದ್ದ ತೋಳಿನ ಉಡುಪು ಧರಿಸುವಂತಿಲ್ಲ. ಮಂಗಳಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ ಬೇರೆ ಆಭರಣಗಳನ್ನು ಧರಿಸುವಂತಿಲ್ಲ.
ಭದ್ರತೆ ಒದಗಿಸಿ:
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ತಪಾಸಣಾ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕರನ್ನು ನೇಮಿಸಿ. ಬಿಗಿ ಪೊಲೀಸ್ ಬಂದೋಬ್ತಸ್ ವ್ಯವಸ್ಥೆ ಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್., ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಇಒಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬಾಕ್ಸ್
ಸಿಸಿಟಿವಿ ಕಡ್ಡಾಯ
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ, ಜಾಮರ್ ಅಳವಡಿಕೆ ಹಾಗೂ ಕೊಠಡಿಯೊಳಗೆ ಗಡಿಯಾರ ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಪೀಠೋಪಕರಣ ಒಳಗೊಂಡಂತೆ ಮೂಲ ಸೌಕರ್ಯ ಒದಗಿಸಬೇಕು. ಪರೀಕ್ಷಾ ವೀಕ್ಷಕರು ಈ ಕುರಿತು ಪೂರ್ವ ಪರಿಶೀಲನೆ ನಡೆಸಬೇಕು ಎಂದು ಎಡಿಸಿ ಸೂಚಿಸಿದರು.
ಇಲೆಕ್ಟ್ರಾನಿಕ್ ಉಪಕರಣ ನಿಷೇಧ
ಪರೀಕ್ಷಾರ್ಥಿಗಳು ಅಥವಾ ಕೊಠಡಿಯ ಮೇಲ್ವಿಚಾರಕರು ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್ ಹಾಗೂ ರಿಸ್ಟ್ ವಾಚ್, ಮತ್ತಿತರ ಉಪಕರಣಗಳನ್ನು ತೆಗೆದುಕೊಂಡು ಬರುವುದನ್ನು ನಿಷೇಧಿಸಿದೆ.
7,908 ಅಭ್ಯರ್ಥಿಗಳು
ಹಾವೇರಿ ನಗರದ 22 ಕೇಂದ್ರಗಳಲ್ಲಿ 7,908 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ 10ರಿಂದ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೂಲ ಪರೀಕ್ಷಾ ಪ್ರವೇಶ ಪತ್ರ ಹಾಗೂ ಐಡಿ ಕಾರ್ಡ್ ತರಬೇಕು ಎಂದು ಎಡಿಸಿ ಹೇಳಿದರು.
22 ಪರೀಕ್ಷಾ ಕೇಂದ್ರಗಳು
ಹಾವೇರಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಕಾಲೇಜು, ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಇಜಾರಿಲಕಮಾಪೂರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ದೇವಗಿರಿ ಸರ್ಕಾರಿ ಇಂಜನಿಯರಿಂಗ್ ಕಾಲೇಜು, ಕೆರೆಮತ್ತಿಹಳ್ಳಿ ಹಾವೇರಿ ವಿಶ್ವವಿದ್ಯಾನಿಲಯ, ಎಸ್.ಎಂ.ಎಸ್. ಪ್ರೌಢಶಾಲೆ, ಮುನ್ಸಿಪಲ್ ಹೈಸ್ಕೂಲ್, ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆ, ಹುಕ್ಕೇರಿಮಠ ಶ್ರೀ ಶಿವ ಬಸವೇಶ್ವರ ಪ್ರೌಢಶಾಲೆ, ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು, ಶಿವಲಿಂಗೇಶ್ವರ ಮಹಿಳಾ ಕಾಲೇಜು, ಸೇಂಟ್ ಆನ್ಸ್ ಹೈಸ್ಕೂಲ್, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಚೋಟೇಶ್ವರ ಸ್ವತಂತ್ರ ವಾಣಿಜ್ಯ ಪಿಯು ಕಾಲೇಜು, ಸರ್.ಎಂ.ವಿಶ್ವೇಶ್ವರಯ್ಯ ಆಂಗ್ಲ ಮಾಧ್ಯಮ ಶಾಲೆ, ಕೆ.ಎಲ್.ಇ. ಸೊಸೈಟಿ ಆಂಗ್ಲ ಮಾಧ್ಯಮ ಶಾಲೆ, ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜ್ಞಾನಗಂಗಾ ಶಿಕ್ಷಣ ಸಮಿತಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net