

ಹಾವೇರಿ: ಕಳೆದ 76 ವರ್ಷಗಳಿಂದ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಡುವ ಮೂಲಕ ಎಬಿವಿಪಿ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿದೆ. ಈ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಹೇಳಿದರು. ನಗರದ ಹಳೆಯ ಪಿಬಿ ರಸ್ತೆಯ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆ ಅಡ್ಡದಾರಿ ಹಿಡಿಯದೇ ಉತ್ತಮ ದಾರಿಯಲ್ಲಿ ಸಾಗುವಂತೆ ಉತ್ತಮ ವ್ಯಕ್ತಿತ್ವ ರೂಪಿಸುವ ಮಹತ್ತರವಾದ ಕೆಲಸವನ್ನು ಎಬಿವಿಪಿ ಮಾಡುತ್ತಿದೆ. ದಶಕಗಳ ಕಾಲ ಸಾವಿರಾರು ಕಾರ್ಯಕರ್ತರು ಮನೆಬಿಟ್ಟು ದೇಶಕ್ಕಾಗಿ, ಸಂಘಟನೆಗಾಗಿ ನಿಸ್ವಾರ್ಥವಾಗಿ ದುಡಿದ ಪರಿಣಾಮ ಇಂದು ಭಾರತದಾದ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಿರ್ಮಾಣವಾಗಿದ್ದಾರೆ. ಇದರಿಂದ ವಿಶ್ವದಾದ್ಯಂತ ಭಾರತದ ಬಗ್ಗೆ ಗೌರವ ಹೆಚ್ಚಾಗಿದೆ. ವಿದೇಶಿಗರು ಮಾತನಾಡುವ ಶೈಲಿ ಸಂಪೂರ್ಣವಾಗಿ ಬದಲಾಗಿದೆ ಎಂದು ಬಣ್ಣಿಸಿದರು.
ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಕಳೆದ ವರ್ಷದಲ್ಲಿ ವಿದ್ಯಾರ್ಥಿ ಪರಿಷತ್ ಮಾಡಿದ ಹೋರಾಟದ ಬಗ್ಗೆ ಮೆಲುಕು ಹಾಕಿದರು. ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯವಾದಾಗ ಮೊದಲು ನೆನೆಪಿಗೆ ಬರುವ ಸಂಘಟನೆ ಎಬಿವಿಪಿ. ವಿದ್ಯಾರ್ಥಿ ಸಮುದಾಯದ ಪ್ರಮುಖ ಸಮಸ್ಯೆಗಳಾದ ಹಾಸ್ಟೆಲ್, ಬಸ್, ಸರ್ಕಾರಿ ಕಾಲೇಜುಗಳ ಸಮಸ್ಯೆಗಳು, ವಿದ್ಯಾರ್ಥಿ ವೇತನ, ಇತರ ಸಮಸ್ಯೆಗಳ ಕುರಿತು ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಟ್ಟಿದೆ. ಮುಂದೆಯೂ ಸಮಸ್ಯೆಗಳ ವಿರುದ್ಧ ಹೋರಾಡಲಿದೆ ಎಂದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ ವಿನಾಯಕ ಸಿಂಗ್ ರಜಪೂತ ವರ್ಗದ ಸಂಚಾಲನೆ ಮಾಡಿದರು. ದಕ್ಷಿಣ ಮಧ್ಯ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಶಿವುಕುಮಾರ, ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ, ಡಾ.ವಿನಾಯಕ ಬಾಳಿಕಾಯಿ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಪ್ರತಿನಿಧಿಗಳು ಉಪ್ಥಿತರಿದ್ದರು.