

ಹಾವೇರಿ: ಜಿಲ್ಲಾಕೇಂದ್ರ ಹಾವೇರಿ ಶಹರ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ವತಿಯಿಂದ ನಗರದಲ್ಲಿ ಸೋಮವಾರ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲೆಯ ಕೆಲ ಗ್ರಾಮಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇಲ್ಲ. ಅಗಡಿ, ದೇವಗಿರಿ ಮಾರ್ಗವಾಗಿ ಕೋಳೂರು, ಚಿಕ್ಕಬಾಸೂರು ಮಾರ್ಗವಾಗಿ ತಿಳವಳ್ಳಿ ಮಾರ್ಗಗಳಿಗೆ ವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜುಗಳಿಗೆ ಹಾಜರಾಗಲು ಆಗುತ್ತಿಲ್ಲ. ಬಸ್ ಸಂಖ್ಯೆ ಕಡಿಮೆ ಇರುವ ಕಾರಣ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಸಂಚರಿಸಬೇಕಾದ ಅಪಾಯಕಾರಿ ಪರಿಸ್ಥಿತಿ ಇದೆ. ಹಾಗಾಗಿ, ಈ ಕೂಡಲೇ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ದರಾಮೇಶ ಪಾಟೀಲ, ಕಾರ್ಯಕರ್ತರಾದ ಪ್ರವೀಣಕುಮಾರ ಅಂಗರಗಟ್ಟಿ, ನಾಗರಾಜ.ಕೆ, ಸಂತೋಷ ಪೂಜಾರ ಮತ್ತು ಮಹಬೂಬ ಅಲಿ ಇತರರಿದ್ದರು.