

ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಹಿಂಪಡೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಹಾವೇರಿ ನಗರ ಘಟಕದ ವತಿಯಿಂದ ನಗರದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ ಮಾತನಾಡಿ, ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು. ಇದರಿಂದ ಭವಿಷ್ಯದಲ್ಲಿ ಕೌಶಲಯುಕ್ತ ಯುವಶಕ್ತಿ ದೊರೆಯಬೇಕು. ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣವನ್ನು ಪಡೆಯಬೇಕು ಎಂಬ ಸದುದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಆದರೆ, ಇಂದಿನ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಕಾರಣಕ್ಕಾಗಿ ಒಂದು ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರೀತಿಯ ಶಿಕ್ಷಣ ಪದ್ಧತಿ ಇರಬೇಕು. ಆ ಶಿಕ್ಷಣ ಪದ್ಧತಿ, ಭಾರತೀಯ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಇನ್ನಿತರ ಕೌಶಲ ನೀಡುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯದ್ದಾಗಿದೆ. ಮುಂದಿನ 20-25 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಯನ್ನು ಮುಂದಿಟ್ಟುಕೊಂಡು ಈ ನೀತಿಯನ್ನು ಹಲವಾರು ಶಿಕ್ಷಣ ತಜ್ಞರು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ರಾಷ್ಟ್ರೀಯತೆಯನ್ನು ತುಂಡು ಮಾಡಿ ಪ್ರತ್ಯೇಕತೆಯ ಹೆಜ್ಜೆಯನ್ನು ಇಡುತ್ತಿರುವುದು ಕರ್ನಾಟಕವನ್ನು ಹಿಮ್ಮುಖ ಚಲನೆಗೆ ತೆಗೆದುಕೊಂಡು ಹೋದಂತಾಗುತ್ತದೆ. ಇದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಎಸಗಿದಂತಾಗುತ್ತದೆ ಎಂದರು.
ತಾಲೂಕು ಸಂಚಾಲಕ ನವೀನ ಜಿ.ಕೆ. ಮಾತನಾಡಿ, ಕೇವಲ ರಾಜಕೀಯ ಕಾರಣಕ್ಕಾಗಿ ಒಂದು ಉತ್ತಮ ಪ್ರಯೋಗ ಶೀಲ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ನಿಜಕ್ಕೂ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಎನ್‌ಇಪಿ ರದ್ದು ಪಡಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಷತ್‌ನ ಪ್ರಮುಖರಾದ ನಾಗರಾಜ ಪುರವಂತಿಗೌಡ್ರ, ಯಲ್ಲಪ್ಪಗೌಡ ಪಾಟೀಲ, ಯುವರಾಜ ವಾಲಿಕಾರ, ಕಿರಣ ಬೊಮ್ಮನಹಳ್ಳಿ, ಶಿವು ನೆಲೋಗಲ್ಲ, ಸಿದ್ದು ಹಿರೇಮಠ, ಶಂಭು ಕಬ್ಬೂರ, ಇತರರಿದ್ದರು.