

ಹಾವೇರಿ: ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಅಗತ್ಯ ಬೋಧಕರನ್ನು ನೇಮಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಎಬಿವಿಪಿ ವತಿಯಿಂದ ಪ್ರತಿಭಟಿಸಲಾಯಿತು.
ಜಿಲ್ಲಾ ಸಂಚಾಲಕ ಸಿದ್ರಾಮೇಶ ಪಾಟೀಲ ಮಾತನಾಡಿ, ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 24 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಒಟ್ಟು ನಾಲ್ವರು ಅಧ್ಯಾಪಕರಿದ್ದರು. ಆದರೆ, ಕಳೆದ ವರ್ಷ ಮತ್ತು ಈ ವರ್ಷ ಸೇರಿ ಒಟ್ಟು ಮೂವರು ಅಧ್ಯಾಪಕರು ವರ್ಗಾವಣೆಯಾಗಿದ್ದಾರೆ. ಸದ್ಯ ಒಬ್ಬರು ಮಾತ್ರ ಉಳಿದಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಉಂಟಾಗಿದೆ. ತರಗತಿ ನಡೆಯದೇ ಪರೀಕ್ಷೆ ಎದುರಿಸುವುದು ಕಷ್ಟಕರವಾಗಲಿದೆ. ಹಾಗಾಗಿ, ಈ ಕೂಡಲೇ ಅಗತ್ಯ ಬೋಧಕರ ನೇಮಕ ಮಾಡಲು ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಎಬಿವಿಪಿ ಪದಾಧಿಕಾರಿಗಳಾದ ಮಹಬೂಬಲಿ ಎಸ್.ಪಿ., ಸಂತೋಷ ಪೂಜಾರ, ಹರೀಶ ಎಸ್., ವೆಂಕಟೇಶ ವಿ., ಭಾರ್ಗವ ಬಿ., ಸಚಿನ ಶೆಟ್ಟಿ, ಬೀರೇಶ ಎಂ.ಬಿ., ಇತರರು ಪಾಲ್ಗೊಂಡಿದ್ದರು.