ಸಾರಿಗೆ ಬಸ್ ಸಮಸ್ಯೆ ಬಗೆಹರಿಸಲು ಆಗ್ರಹ; ಎಬಿವಿಪಿಯಿಂದ ಹಾವೇರಿ ಡಿಪೋದಲ್ಲಿ ಪ್ರತಿಭಟನೆ

5 HVR 5
Published on

ಹಾವೇರಿ: ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ವಿವಿ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವುದು, ಸಮಯ ವೇಳಾಪಟ್ಟಿ ಬದಲಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ವತಿಯಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಡೀಪೋ ಬಳಿ ಜಮಾಯಿಸಿದ ಕಾರ್ಯಕರ್ತರು ಸಾರಿಗೆ ಬಸ್ ಸೌಕರ್ಯದ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು. ಹಾವೇರಿಯಿಂದ ಸೋಮಾಪುರಕ್ಕೆ ಬರುತ್ತಿದ್ದ ಬಸ್ ಮಾರ್ಗವನ್ನು ಬದಲಾಯಿಸಿ ಹಾವೇರಿಯಿಂದ ಕೂಸನೂರು ಮಾರ್ಗದಲ್ಲಿ ಕಳುಹಿಸಲಾಗುತ್ತಿದೆ. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಮಯಕ್ಕೆ ಸರಿಯಾಗಿ ತರಗತಿ, ಪರೀಕ್ಷೆಗಳಿಗೆ ಹಾಜರಾಗಲು ಆಗುತ್ತಿಲ್ಲ. ಹಾಗಾಗಿ, ಮೊದಲಿನಂತೆ ಹಾವೇರಿಯಿಂದ ಸೋಮಾಪುರಕ್ಕೆ ಬಸ್ ಮಾರ್ಗ ಬದಲಾಯಿಸಿ. ಬೆಳಗ್ಗೆ 9.30ರೊಳಗಾಗಿ ಹಾವೇರಿ ತಲುಪುವಂತೆ. ವಾಪಸ್ ಹಾವೇರಿಯಿಂದ ಸಂಜೆ 5.30ಕ್ಕೆ ಬಿಡುವಂತೆ ಸಮಯ ಹೊಂದಾಣಿಕೆ ಮಾಡಿ ಎಂದು ಒತ್ತಾಯಿಸಿದರು.
ಹಾವೇರಿ ನಗರದ ಟಿಎಂಎ, ಸಿ.ಬಿ.ಕೊಳ್ಳಿ ಕಾಲೇಜ್‌ಗಳಿಗೆ ನಿಲುಗಡೆ ಮಾಡಬೇಕು. ಹಾವೇರಿ ಚಿಕ್ಕಬಾಸೂರ ಮಾರ್ಗದಲ್ಲಿ ಕೇವಲ ಒಂದೇ ಬಸ್ ಇದ್ದು, ಟ್ರಿಪ್ ಸಂಖ್ಯೆ ಹೆಚ್ಚಿಸಬೇಕು. ಇತ್ತೀಚೆಗೆ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಕಂಡಕ್ಟರ್ ಅನ್ನು ಅಮಾನತು ಮಾಡಬೇಕು. ಹಾವೇರಿ- ಹೊಂಬರಡಿ ಮಾರ್ಗವಾಗಿ ಮತ್ತೊಂದು ಬಸ್ ಬಿಡಬೇಕು. ಹಾವೇರಿ- ಶಿರಸಿ ಮಾರ್ಗದ ಬಸ್‌ಗಳು ವರ್ದಿ ಕ್ರಾಸ್ ಮತ್ತು ಗೌರಾಪುರಕ್ಕೆ ನಿಲುಗಡೆ ಮಾಡಲು ಸೂಚಿಸಬೇಕು ಎಂದು ಮನವಿ ಒತ್ತಾಯಿಸಿ ಡಿಪೋ ಮ್ಯಾನೇಜರ್‌ಗೆ ಮನವಿ ಪತ್ರ ಸಲ್ಲಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ತಾಲೂಕು ಸಂಚಾಲಕ ನವೀನ ಜಿ.ಕೆ., ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದು ಹಿರೇಮಠ, ಮಾಧ್ಯಮ ಪ್ರಮುಖ ಸೋಮಶೇಖರ ಎಂ., ಅರ್ಜುನ ಎಂ., ಗಣೇಶ ಎಸ್., ಸಂತೋಷ ಡಿ., ಕಿರಣ ಎಚ್., ಪದ್ಮರಾಜ ಡಿ., ಮೇಘಾ ಕೆ., ಚಂದ್ರು ಟಿ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net