

ಹಾವೇರಿ: ಆಪರೇಷನ್ ಸಿಂಧೂರ ಹೆಸರಲ್ಲಿ ಪಾಕಿಸ್ತಾನದ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿರುವ ಭಾರತೀಯ ಸೈನ್ಯದ ಕಾರ್ಯವನ್ನು ಶ್ಲಾಘಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾವೇರಿ ನಗರ ಶಾಖೆ ವತಿಯಿಂದ ನಗರದ ಕಾಗಿನೆಲೆ ವೃತ್ತದಲ್ಲಿ ಬುಧವಾರ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ರಾಜ್ಯ ಸಹಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಧರ್ಮವನ್ನು ಕೇಳಿ ನಮ್ಮ ದೇಶದ 27 ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ವಾಯುದಾಳಿ ಮಾಡಿ ಪಾಕಿಸ್ತಾನದ ಉಗ್ರರ ಹತ್ಯಗೈದಿದೆ ಎಂದರು.
ನಮ್ಮ ಭಾರತೀಯ ಸೇನೆಗೆ ವಿಜಯವಾಗಲಿ. ನಮ್ಮ ದೇಶದ ಸೈನಿಕರ ತಾಕತ್ತು ಪಾಪಿ ಪಾಕಿಸ್ತಾನಕ್ಕೆ ತಿಳಿಯಲಿ ಹಾಗೂ ನಮ್ಮ ದೇಶದ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಆ ಉಗ್ರಗಾಮಿಗಳ ದೇಶಕ್ಕೆ ಇವತ್ತು ನಮ್ಮ ಹೆಣ್ಣುಮಕ್ಕಳು ಹಣೆಗೆ ಹಚ್ಚುವ ಸಿಂಧೂರದ ಹೆಸರಿನಲ್ಲಿ ವಾಯು ದಾಳಿ ನಡೆಸಿರುವುದು ನಮ್ಮ ದೇಶದ ಹೆಣ್ಣುಮಕ್ಕಳ ಗೌರವವನ್ನು ಹೆಚ್ಚಿಸಿದೆ ಎಂದರು.
ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ಆಕಾಶ ಹುಲ್ಲತ್ತಿ, ಶರಣ ಕುಮಾರ, ಆಕಾಶ ಬೋಸ್ಲೆ, ಸಂತೋಷ ವೈ.ಎ., ಕಿರಣಕುಮಾರ ಕೆ., ಪ್ರವೀಣ ಎ.ಜಿ., ಸೇರಿದಂತೆ ಹಲವರು ಪಾಲ್ಗೊಂಡಿದ್ದರು.