ಕಾಶ್ಮೀರ ದಾಳಿಯಲ್ಲಿ ಮಡಿದವರಿಗೆ ಎಬಿವಿಪಿ ಶ್ರದ್ದಾಂಜಲಿ

25 HVR 3
Published on

ಹಾವೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ಶಾಖೆ ವತಿಯಿಂದ ನಗರದ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಸಿಲುಕಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಎಬಿವಿಪಿ ಉತ್ತರ ಪ್ರಾಂತ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ. ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುತ್ತದೆ. ಆದರೂ ಸಹ ಅಲ್ಲಿನ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ ಎಂದರು.

ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಮಾರುಕಟ್ಟೆಗಳಲ್ಲಿ ದಾಳಿಗಳು ಹಾಗೂ ಪ್ರವಾಸಿಗರ ಮೇಲಿನ ದಾಳಿ ಗಮನಿಸುವುದಾದರೆ ಕಾಶ್ಮೀರದ ಶಾಂತಿ ಮತ್ತು ಭಾರತದೊಂದಿಗಿನ ಏಕತೆಗೆ ಉಗ್ರರು, ಪ್ರತ್ಯೇಕವಾದಿಗಳು ತೀವ್ರ ಸವಾಲು ಒಡ್ಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ವ್ಯಾಪಕ ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರ ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.

ಸಭೆಯಲ್ಲಿ ಎಬಿವಿಪಿ ತಾಲೂಕು ಸಂಚಾಲಕ ನವೀನ ಜಿ.ಕೆ., ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ಕಾರ್ಯಕರ್ತರಾದ ಪ್ರವೀಣ ಜಿ., ಬೀರೇಶ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net