ಗ್ರಂಥಾಲಯದ ಸಮಯ ವಿಸ್ತರಿಸಿ, ರಜೆ ಕಡಿತಗೊಳಿಸಿ; ಮುಖ್ಯ ಗ್ರಂಥಪಾಲಕಿಗೆ ಎಬಿವಿಪಿ ಮನವಿ

27 HVR 5
Published on

ಹಾವೇರಿ: ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಪ್ರತಿ ಸೋಮವಾರ ಸೇರಿದಂತೆ ಅನವಶ್ಯಕ ರಜೆ ನೀಡುತ್ತಿರುವ ಪರಿಣಾಮ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇನ್ನುಮುಂದೆ ಅನಗತ್ಯ ರಜೆ ನೀಡದೇ ಅಧ್ಯಯನಕ್ಕೆ ಅವಕಶಾ ಮಾಡಿಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ಗ್ರಂಥಾಲಯ ಸಿಬ್ಬಂದಿ ಮೂಲಕ ಮುಖ್ಯ ಗ್ರಂಥಪಾಲಕಿ ಸುಮಾ ಕೋಡಿಹಳ್ಳಿ ಅವರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.
ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಬಂದು ನೆಲೆಸಿದ್ದಾರೆ. ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳು ಅಧ್ಯಯನ ನಡೆಸಲು ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಸಮಯ ಅನಗತ್ಯ ರಜೆಗಳಿಂದ ಕಿರಿಕಿರಿಯಾಗುತ್ತಿದೆ. ಪ್ರತಿ ಸೋಮವಾರ, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಇವೆಲ್ಲವುಗಳ ಸ್ಪರ್ಧಾ ವಿದ್ಯಾರ್ಥಿಗಳ ಪಾಲಿಗೆ ಅನಾವಶ್ಯಕ ರಜೆದಿನಗಳಾಗಿವೆ.
ನಗರದಲ್ಲಿ ಅನೇಕ ಖಾಸಗಿ ಗ್ರಂಥಾಲಯಗಳು ನಿರ್ಮಾಣಗೊಂಡಿದ್ದು, ಸ್ಪರ್ಧಾವಿದ್ಯಾರ್ಥಿಗಳಿಂದ ಅವುಗಳ ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಗ್ರಂಥಾಲಯವು ಜಿಲ್ಲೆಯ ಅನೇಕ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಹಾಗಾಗಿ, ಈ ಕೂಡಲೇ ಅನಗತ್ಯ ರಜೆಗಳನ್ನು ಹಿಂಪಡೆಯಬೇಕು. ಸದ್ಯ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೂ ಗ್ರಂಥಾಲಯ ತೆರೆದಿರುತ್ತದೆ. ಹಲವರಿಗೆ ತಮ್ಮ ಕೆಲಸ ಮುಗಿಸಿ ಬಂದು ಓದಲು ಈ ಸಮಯ ಸಾಕಾಗುತ್ತಿಲ್ಲ. ಆದ್ದರಿಂದ ಈ ಸಮಯ ಬದಲಾವಣೆ ಮಾಡಿ ಬೆಳಗ್ಗೆ 8ರಿಂದ ರಾತ್ರಿ 12 ಗಂಟೆಯವರೆಗೆ ತೆರೆಯಬೇಕು. ಇಲ್ಲದಿದ್ದರೆ ಎಬಿವಿಪಿಯಿಂದ ಪ್ರತಿಭಟನೆ ಮಾಡುವುದಾಗಿ ಪರಿಷತ್‌ನ ಹಾವೇರಿ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಮುಖರಾದ ನಾಗರಾಜ ಬ್ಯಾಡಗಿ, ಸತೀಶ ದೊಡ್ಡಮನಿ, ವಿನಾಯಕ ಕುರುಬಗೊಂಡ, ನಿಂಗಪ್ಪ ಗಾಳೆಮ್ಮನವರ, ಜಯಮ್ಮ ತಿಮ್ಮಾಪುರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net