ಮನೆಹಾನಿಗೆ 5 ಲಕ್ಷ ರೂ. ಪರಿಹಾರ ಕೊಡಿ; ಆಮ್ ಆದ್ಮಿ ಪಕ್ಷದಿಂದ ಸರ್ಕಾರಕ್ಕೆ ಆಗ್ರಹ

29 HVR 5
Published on

ಹಾವೇರಿ: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಗೆ ಸಾವಿರಾರು ಮನೆಗಳು ಹಾನಿಗೀಡಾಗಿದ್ದು, ಸಂಪೂರ್ಣವಾಗಿ ಹಾನಿಗೀಡಾಗಿರುವ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಶಾಸಕ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮೂಲಕ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವ ಕಾರಣ ಜನ ತತ್ತರಿಸಿದ್ದಾರೆ. ಮನೆಗಳು ರೈತರ ಬೆಳೆಗಳು ಹಾನಿಗೀಡಾಗಿವೆ. ಇನ್ನೂ ಹಲವು ಮನೆಗಳು ಬೀಳುವ ಹಂತ ತಲುಪಿದ್ದು ಹಲವರು ಅದರಲ್ಲೇ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂತಹ ಮನೆಗಳಲ್ಲಿ ಇರುವವರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಸಂಭವನೀಯ ಅನಾಹುತಗಳನ್ನು ತಪ್ಪಿಸಬೇಕು ಎಂದರು.
ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಜಮೀನುಗಳಲ್ಲಿ ವಿದ್ಯುತ್ ತಂತಿಗಳಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಕೆಲಸ ಹೆಸ್ಕಾಂನಿಂದ ಆಗಬೇಕು. ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇದೆ. ಹಾಗಾಗಿ, ಈಗಾಗಲೇ ಬಿದ್ದಿರುವ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಕೊಡಬೇಕು. ಉಳಿದ ಶಿಥಿಲಾವಸ್ಥೆಯ ಮನೆಗಳಲ್ಲಿರುವವರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಹಸಿರು ಬರಗಾಲ ಎಂದು ಘೋಷಿಸಿ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಮಂಜಪ್ಪ ಬಸನಗೌಡ್ರ, ಬಸವರಾಜ ತಳವಾರ, ಹುಸೇನ್‌ಸಾಬ ದೇಸಳ್ಳಿ, ಶಿವಾನಂದ ಹಡಪದ, ಮೌಲಾಲಿ ಮುಲ್ಲಾ, ಲಲಿತಮ್ಮ ಲಮಾಣಿ, ಮಂಜವ್ವ ಚೌಡಣ್ಣನವರ, ಗಂಗವ್ವ ಲಮಾಣಿ, ನಾಗಮ್ಮ ತಳವಾರ, ರಹಿಮಾ ಮುಲ್ಲಾ, ನೀಲವ್ವ ಬಿದರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net