31 ತಿಂಗಳಲ್ಲಿ ರಸ್ತೆ ಅಪಘಾತಕ್ಕೆ 715 ಬಲಿ ! ; 3,397 ಪ್ರಯಾಣಿಕರಿಗೆ ಗಾಯ; ಪೊಲೀಸರ ನಿರಂತರ ಜಾಗೃತಿ ನಡುವೆಯೂ ತಪ್ಪದ ಅವಘಡಗಳು

Road accident death Story
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ರಸ್ತೆ ಸಂಚಾರ ನಿಯಮಗಳ ಕಡ್ಡಾಯ ಪಾಲನೆ ಕುರಿತು ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಅಪಘಾತಗಳ ಸಂಖ್ಯೆ ಮಾತ್ರ ಏರುಗತಿಯಲ್ಲೇ ಸಾಗುತ್ತಲಿದ್ದು, ಜಿಲ್ಲೆಯಲ್ಲಿ ಕಳೆದ 31 ತಿಂಗಳಲ್ಲಿ ರಸ್ತೆ ಅಪಘಾತಕ್ಕೆ ಬರೋಬ್ಬರಿ 715 ಜನರು ಬಲಿಯಾಗಿ, 3,397 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತ ಮತ್ತು ಸಾವು- ನೋವಿಗೆ ಅತಿಯಾದ ವೇಗ, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದು, ಚಾಲನಾ ಪರವಾನಗಿ (ಡಿಎಲ್) ಇಲ್ಲದೇ ವಾಹನ ಓಡಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಹಾಳಾದ ರಸ್ತೆಗಳು, ಸೇರಿದಂತೆ ಹಲವು ಕಾರಣಗಳಿವೆ. ಇದರಲ್ಲಿ ಅತಿಯಾದ ವೇಗ ಮತ್ತು ಹೆಲ್ಮೆಟ್ ಧರಿಸದ್ದಕ್ಕೆ ಹೆಚ್ಚು ಜೀವಗಳು ಕೈಚೆಲ್ಲಿರುವುದು ಪಾಠವಾಗಬೇಕಿದೆ.
ಜಿಲ್ಲೆಯಲ್ಲಿ 2022ರಲ್ಲಿ 260 ಅಪಘಾತ ಪ್ರಕರಣಗಳಲ್ಲಿ 286 ಜನ ಮೃತಪಟ್ಟಿದ್ದು, 274 ಅಪಘಾತ ಪ್ರಕರಣಗಳಲ್ಲಿ 1,362 ಪ್ರಯಾಣಿಕರು ಗಾಯಗೊಂಡಿದ್ದಾರೆ. 2023ರಲ್ಲಿ 255 ಪ್ರಕರಣಗಳಲ್ಲಿ 270 ಜನ ಮೃತಪಟ್ಟಿದ್ದು, 523 ಕೇಸ್‌ಗಳಲ್ಲಿ 1,360 ಜನ ಗಾಯಗೊಂಡಿದ್ದಾರೆ. 2024ರಲ್ಲಿ (ಈವರೆಗೆ) 130 ಕೇಸ್‌ಗಳಲ್ಲಿ 159 ಪ್ರಯಾಣಿಕರು ಅಸುನೀಗಿದ್ದು, 301 ಅಪಘಾತ ಪ್ರಕರಣಗಳಲ್ಲಿ 675 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ.
ಅಪಘಾತಗಳಿಗೆ ಸಂಚಾರ ನಿಯಮ ಉಲ್ಲಂಘನೆಯ ಜೆತೆಗೆ ಹದಗೆಟ್ಟ ರಸ್ತೆಗಳೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಹಾಗೂ ಛತ್ರ ಬಳಿ ರಾಷ್ಟ್ರೀಯ ಹೆದ್ದಾರಿ ಷಟ್ಪಥ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ. ಹಾವೇರಿ- ಗುತ್ತಲ ರಸ್ತೆ, ಗುತ್ತಲ- ಲಕ್ಷ್ಮೇಶ್ವರ ಹೆದ್ದಾರಿಗಳು ಸೇರಿದಂತೆ ಇತರ ಅನೇಕ ರಸ್ತೆಗಳು ಹಾಳಾಗಿವೆ. ಕೆಲವೆಡೆ ಗುಂಡಿಗಳಿಂದಲೇ ಕೂಡಿಕೊಂಡಿವೆ. ಇಂತಹ ರಸ್ತೆಗಳಲ್ಲಿ ಅಪಘಾತ ಸಾಮಾನ್ಯ ಎಂಬಂತಾಗಿದೆ.
ಈ ಎಲ್ಲ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಗಮನಹರಿಸಬೇಕು. ಪೊಲೀಸ್ ಇಲಾಖೆ ಜತೆಗೆ ಆರ್‌ಟಿಒ, ಇತರ ಇಲಾಖೆಗಳಿಗೂ ಜವಾಬ್ದಾರಿ ವಹಿಸಬೇಕು. ರಸ್ತೆ ಅಪಘಾತಗಳ ತಡೆಗೆ ಮತ್ತಷ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ‘ವಿಜಯವಾಣಿ’ ಕಳಕಳಿ.

2.77 ಕೋಟಿ ದಂಡ ವಸೂಲಿ
ಜಿಲ್ಲೆಯಲ್ಲಿ ಸಂಚಾರ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು, ಎರಡೂವರೆ ವರ್ಷಗಳಲ್ಲಿ 2.77 ಕೋಟಿ ರೂ. ದಂಡ ಸಂಗ್ರಹಿಸಿದೆ. 2022ರಲ್ಲಿ 30,700 ಪ್ರಕರಣಗಳಲ್ಲಿ 82 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. 2023ರಲ್ಲಿ 26,000 ಕೇಸ್‌ಗಳಲ್ಲಿ 97 ಲಕ್ಷ ರೂ. ಹಾಗೂ 2024ರಲ್ಲಿ (ಜನವರಿಯಿಂದ ಈವರೆಗೆ) 18,000 ಕೇಸ್‌ಗಳಿಂದ 98 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಟೋಲ್‌ಗಳಲ್ಲಿ ಜಾಗೃತಿ
ಹೆದ್ದಾರಿಗಳಲ್ಲಿ ಅತಿಯಾದ ವೇಗದ ಚಾಲನೆ ತಡೆಯಲು ಸ್ಪೀಡ್ ರಡಾರ್ ಗನ್ ಬಳಸಿ, ದಂಡ ವಿಧಿಸಲಾಗುತ್ತಿದೆ. ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಲೇನ್ ಡಿಸಿಪ್ಲೇನ್, ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಕುರಿತು ದಂಡ ವಿಧಿಸುವುದು, ಟೋಲ್‌ಗಳು, ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಎಎಸ್‌ಪಿ ಸಿ.ಗೋಪಾಲ.

ಕೋಟ್:
ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಇಲಾಖೆಯಿಂದ ನಿರಂತರವಾಗಿ ಮಾಡಲಾಗುತ್ತಿದೆ. ಎರಡು ಹೈವೆ ಪೆಟ್ರೋಲಿಂಗ್ ವಾಹನಗಳ ಮೂಲಕ ನಮ್ಮ ಸಿಬ್ಬಂದಿ ಹೆದ್ದಾರಿ ಮೇಲೆ ನಿಗಾ ಇಟ್ಟಿದ್ದಾರೆ. ಚಾಲಕರು ಕೂಡ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು.
- ಸಿ.ಗೋಪಾಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ

ಸಾವು- ನೋವಿನ ಅಂಕಿ-ಅಂಶ
ವರ್ಷ ಅಪಘಾತಪ್ರಕರಣಗಳು ಸಾವು ಗಾಯ

2022 534 286 1,362
2023 778 270 1,360
2024 431 159 675

ಒಟ್ಟು 1,743 715 3,397

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net