

ಹಾವೇರಿ: ಹಾವೇರಿ ನಗರಕ್ಕೆ 24/7 ಕುಡಿಯುವ ನೀರು ಸರಬರಾಜು ಯೋಜನೆಗೆ 2014ರಲ್ಲಿ ಅನುಮತಿ ನೀಡಿ 30 ಕೋಟಿ ರೂ.ಯನ್ನೂ ಬಿಡುಗಡೆ ಮಾಡಲಾಗಿತ್ತು. 10 ವರ್ಷವಾದರೂ ಈವರೆಗೆ ಯೋಜನೆ ಜಾರಿಯಾಗಿಲ್ಲ. ಹಾಗಾದರೆ, 30 ಕೋಟಿ ಏನಾಯ್ತು ಎಂದು ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದ ಸಚಿವ ಶಿವಾನಂದ ಪಾಟೀಲರು, ಸರಿಯಾದ ದಾಖಲೆ ಕೊಡದಿದ್ದಲ್ಲಿ ಅಧಿಕಾರಿಗಳಿಂದಲೇ ರಿಕವರಿ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.
ಯೋಜನೆ ಜಾರಿಗೆ ಬರೋಬ್ಬರಿ 14 ಬಾರಿ ಮುಂದೂಡಿರುವವರು ಯಾರು ? ಕಾಮಗಾರಿ ಏನಾಯ್ತು ? 30 ಕೋಟಿ ರೂ. ಎಲ್ಲೆಲ್ಲಿ ಖರ್ಚಾಯ್ತು ? ಎಂಬ ಸಮಗ್ರ ಮಾಹಿತಿ ಇಲ್ಲ. ಇದಕ್ಕೆ ಹಾವೇರಿ ನಗರಸಭೆ ಹಾಗೂ ಕೆಯುಐಡಿಎಫ್‌ಸಿ ಅಧಿಕಾರಿಗಳೇ ಜವಾಬ್ದಾರರು. ಈ ಕುರಿತು ಸಿಎಂ, ನಾನು ಹಲವು ಬಾರಿ ಸೂಚಿಸಿದ್ದರೂ ಬಗೆಹರಿದಿಲ್ಲ. 30 ಕೋಟಿ ಹಣದ ಕಾಮಗಾರಿಯ ದಾಖಲೆ ಕೊಡದಿದ್ದಲ್ಲಿ ನಿಮ್ಮಿಂದ ರಿಕವರಿ ಮಾಡುತ್ತೇನೆ. ನಿಮ್ಮನ್ನು ರೋಡ್‌ಗೆ ತಂದು ನಿಲ್ಲಿಸುತ್ತೇನೆ ಎಂದು ಭರ್ಜರಿ ಕ್ಲಾಸ್ ತೆಗೆದುಕೊಂಡರು. ಜಿಲ್ಲಾಧಿಕಾರಿಯವರು 20 ದಿನದೊಳಗೆ ಈ ಯೋಜನೆಯ ವರದಿ ಕೊಡಿ. ಇದರಲ್ಲಿ ಯಾರ ತಪ್ಪಿದೆ ಫಿಕ್ಸ್ ಮಾಡಿ ಎಂದು ನಿರ್ದೇಶಿಸಿದರು.
2014ರಲ್ಲಿ ನೀವೇ ಶಾಸಕರು. ಆಗ ಅನುಮತಿ ನೀಡಿದ್ದು ನೀವೆ. ಈಗಲೂ ನೀವೇ ಇದ್ದೀರಿ. ಆದರೂ ಯಾಕೆ ಸಮಸ್ಯೆ ಬಗೆಹರಿಸಿಲ್ಲ. ನೀವು ರಿವೀವ್ ಮಾಡಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸಚಿವರು ಪ್ರಶ್ನಿಸಿದರು. ‘ಇಲ್ಲ ಸರ್ ಈ ಕೇಸ್ ಕೋರ್ಟ್‌ನಲ್ಲಿದೆ’ ಎಂದು ಶಾಸಕರು ಉತ್ತರಿಸಿದರು. 2023ರಲ್ಲಿ ಕೋರ್ಟ್‌ಗೆ ಹೋಗಿದೆ. ನನಗೆ ಎಲ್ಲವೂ ಗೊತ್ತಿದೆ. ನಗರಸಭೆ ಕಮಿಷನರ್ ಅಮಾನತಿಗೆ ಸೂಚಿಸಿದ್ದೆ. ಆದರೂ ಏಕೆ ಅಮಾನತು ಮಾಡಿಲ್ಲ ಎಂದು ಕೇಳಿದರು. ಕೆಲಸ ಮಾಡುವ ಅಧಿಕಾರಿಗಳನ್ನು ಇಟ್ಟುಕೊಳ್ಳಿ, ಮಾಡದವರನ್ನು ತೆಗೆದುಹಾಕಿ ಎಂದು ಸಚಿವ ಶಿವಾನಂದ ಪಾಟೀಲ ಖಡಕ್ ಸೂಚನೆ ನೀಡಿದರು.