ನಿರೀಕ್ಷೆ ಬೆಟ್ಟದಷ್ಟು, ಸಿಕ್ಕಿದ್ದು ಹಿಡಿಯಷ್ಟು; ಐವರು ಕಾಂಗ್ರೆಸ್ ಶಾಸಕರಿದ್ದರೂ ಬಜೆಟ್‌ನಲ್ಲಿ ಜಿಲ್ಲೆಗೆ ಸಿಗದ ಪ್ರಾತಿನಿಧ್ಯತೆ; ಹುಸಿಯಾದ ಭರವಸೆ

CM Siddaramayya
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಗ್ಯಾರಂಟಿ ಯೋಜನೆಗಳ ಭರಾಟೆಯ ನಡುವೆಯೂ ರಾಜ್ಯ ಸರ್ಕಾರದ ಬಜೆಟ್ ಮೇಲೆ ಜಿಲ್ಲೆಯ ಜನತೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಸಿದ್ದರಾಮಯ್ಯ ಬಜೆಟ್ ಮೇಲೆ ಜಿಲ್ಲೆಯ ಜನತೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಸಿಎಂ ಕೊಟ್ಟಿದ್ದು ಹಿಡಿಯಷ್ಟು ಮಾತ್ರ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಸಚಿವ ಸ್ಥಾನದಿಂದ ವಂಚಿತವಾಗಿರುವ ಜಿಲ್ಲೆಯಶಾಸಕರು ಬಜೆಟ್‌ನಲ್ಲಾದರೂ ವಿಶೇಷ ಪ್ಯಾಕೇಜ್ ಸಿಗುವ ನಿರೀಕ್ಷೆಯಲ್ಲಿದ್ದರು. ಹಾಗಾಗಿ, ಜಿಲ್ಲೆಗೆ ಸಿಎಂ ವಿಶೇಷ ಯೋಜನೆಗಳು ಹಾಗೂ ಅನುದಾನಗಳನ್ನು ಘೋಷಿಸುವ ನಿರೀಕ್ಷೆ ಘಾಡವಾಗಿತ್ತು. ಬಜೆಟ್ ಪೂರ್ವದಲ್ಲಿ ಸಿಎಂ ಅವರಲ್ಲಿ ಜಿಲ್ಲೆಯ ಶಾಸಕರು ಮನವಿಯನ್ನೂ ಮಾಡಿಕೊಂಡಿದ್ದರು. ಆದರೆ, ಬಜೆಟ್‌ನಲ್ಲಿ ಒಂದೆರೆಡು ಯೋಜನೆ ಬಿಟ್ಟರೆ ಅಂತಹ ಯಾವುದೇ ಮಹತ್ವದ ಘೋಷಣೆಗಳು ಆಗಲಿಲ್ಲ. ಕಾರಣ ಜನರು ಸೇರಿದಂತೆ ಸ್ವಪಕ್ಷದ ಜನಪ್ರತಿನಿಧಿಗಳಲ್ಲೂ ಬೇಸರ ಮೂಡಿದೆ. ರಾಣೆಬೆನ್ನೂರ ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿರುವ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು. ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀತಲಗೃಹ ಸ್ಥಾಪನೆ. ಹಿರೇಕೆರೂರಲ್ಲಿ ವಚನಕಾರ ಸರ್ವಜ್ಞ ಪ್ರಾಧಿಕಾರ ಅಭಿವೃದ್ಧಿಪಡಿಸುವುದು ಹಾಗೂ ಹಾವೇರಿ ಡಿಸಿ ಕಚೇರಿ ಬಳಿ ನಿರ್ಮಾಣ ಹಂತದಲ್ಲಿರುವ ವಿಜ್ಞಾನ ಕೇಂದ್ರ ಕಾಮಗಾರಿ ಪೂರ್ಣಗೊಳಿಸುವ ಅಂಶಗಳು ಮಾತ್ರ ಬಜೆಟ್‌ನಲ್ಲಿ ಕಂಡುಬಂದಿದೆ. ವಿಜ್ಞಾನ ಕೇಂದ್ರ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಅಥವಾ ಪ್ರಾದೇಶಿಕ ಕಚೇರಿ, ರೈತರ ಸಾಲ ಮನ್ನಾ, ಕೈಗಾರಿಕಾ ವಲಯ ಸ್ಥಾಪನೆ, ಹಾವೇರಿ ಜಿಲ್ಲಾ ಕೇಂದ್ರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವಿಶೇಷ ಅನುದಾನ, ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಗೆ ಅನುದಾನ, ನರೇಗಲ್ಲ ಕೂಸನೂರ ಏತ ನೀರಾವರಿ ಯೋಜನೆ, ಹಾವಂಶಿ- ಶಾಕಾರ ಸೇತುವೆ ನಿರ್ಮಾಣ, ಮದಗ ಮಾಸೂರ ಕೆಂಚಮ್ಮನ ಕೆರೆ ಕಾಲುವೆ ಆಧುನೀಕರಣ, ಸೇರಿದಂತೆ ಹಲವು ಬೇಡಿಕೆಗಳು ಇದ್ದವು. ಜಿಲ್ಲೆಯ ಭರವಸೆಗಳು ಈಡೇರದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದಿನಂತೆ ಮತ್ತೆ ಜಿಲ್ಲೆಯನ್ನು ನಿರ್ಲಕ್ಷಿೃಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸ್ವಪಕ್ಷೀಯರಿಂದಲೇ ಬೇಸರದ ಮಾತುಗಳು ಹೊರಳಲಾರಂಭಿಸಿವೆ.
ಜಿಲ್ಲೆಗೆ ಸಿಕ್ಕಿದ್ದು ಇಷ್ಟೇ…

  • ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀತಲಗೃಹ ಸ್ಥಾಪನೆ
  • ರಾಣೆಬೆನ್ನೂರಿನಲ್ಲಿ 112 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು
  • ತ್ರಿಪದಿಗಳ ಮೂಲಕ ಜೀವನಸಾರವನ್ನು ಹೇಳಿದ ವಚನಕಾರ ಸರ್ವಜ್ಞನ ಸ್ಮಾರಕವನ್ನು ಹಿರೇಕೆರೂರ ತಾಲೂಕಿನಲ್ಲಿ ಅಭಿವೃದ್ಧಿಪಡಿಸುವುದು
  • ಹಾವೇರಿ ವಿಜ್ಞಾನ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು
  • ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಮೂಲಕ ತತ್ವಪದ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಸೇರಿದಂತೆ ಸಾಹಿತ್ಯ ಸಮೀಕ್ಷೆ ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net