

ವಿಜಯವಾಣಿ ವಿಶೇಷ ಹಾವೇರಿ
ಬಾಲಕನ ಸಾವಿಗೆ ಹಾವೇರಿ ನಗರಸಭೆಯ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿದ ಸ್ಥಳೀಯ ನಿವಾಸಿಗಳು ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಇಲ್ಲಿನ ಪಿಬಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೂಲಿಕಾರರು, ಬಡ ಜನರು ವಾಸಿಸುವ ಶಿವಾಜಿನಗರದ ಬಗೆಗಿನ ನಿರ್ಲಕ್ಷೃ ಕುರಿತು ಬೇಸರದ ನುಡಿಗಳನ್ನಾಡಿದರು.
ಶ್ರೀಮಂತರು ಇರುವ ನಗರಕ್ಕೆ ಹೆಚ್ಚಿನ ಸೌಲಭ್ಯ ಕೊಡುವ ನಗರಸಭೆಗೆ, ಬಡಜನರೇ ಹೆಚ್ಚಾಗಿ ವಾಸಿಸುವ ಶಿವಾಜಿನಗರ ಎಂದರೆ ಯಾವಾಗಲೂ ನಿರ್ಲಕ್ಷೃ. ಇದೇ ಕಾರಣಕ್ಕೆ ರಡು ವಾರದ ಹಿಂದೆ ಚರಂಡಿ ಅಗಲೀಕರಣಕ್ಕಾಗಿ ಇಲ್ಲಿ ಆಲದಮರ ತೆರವುಗೊಳಿಸದ ಬಳಿಕ ಚರಂಡಿ ಮೇಲಿದ್ದ ಕಲ್ಲುಗಳನ್ನು ಮುಚ್ಚದೇ ಹಾಗೇ ಕೈಬಿಟ್ಟಿದ್ದರು. ಇದೇ ಕಾರಣಕ್ಕೆ ಬಾಲಕ ನಿವೇದನ ಮೃತಪಟ್ಟಿದ್ದಾನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುನ್ಸಿಪಲ್ ಮೈದಾನದಿಂದ ಮಳೆನೀರು ಹರಿದು ಎಸ್‌ಪಿ ಕಚೇರಿ ಕಡೆಗೆ ಬರುತ್ತದೆ. ಪಿಬಿ ರಸ್ತೆಯ ಅಕ್ಕಪಕ್ಕದ ಎರಡೂ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಮಳೆ ಬಂದಾಗ ನೀರು ಶಿವಾಜಿ ನಗರದ ಮನೆಗಳಿಗೆ ನುಗ್ಗುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಶಿವಾಜಿ ನಗರದಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿದರೂ ಯಾರೂ ಗಮನಿಸುತ್ತಿಲ್ಲ. ಹೀಗಾಗಿ, ದೊಡ್ಡ ಅನಾಹುತ ಸಂಭವಿಸಿದೆ. ಇನ್ನಾದರೂ ಇದಕ್ಕೆ ಶಾಶ್ವತ ಪರಿಹಾರ ಸೂಚಿಸಬೇಕು. ಬಾಲಕನ ಸಾವಿಗೆ ನ್ಯಾಯ ದೊರಕಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು. ಪ್ರತಿಭಟನೆಯಿಂದಾಗಿ ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿತ್ತು.
ಪೊಲೀಸರೊಂದಿಗೆ ವಾಗ್ವಾದ
ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ನ್ಯಾಯ ಕೇಳಲು ಪ್ರತಿಭಟನೆ ಮಾಡುವಾಗ ಅಡ್ಡಿಪಡಿಸುತ್ತಾರೆ. ನಿಮಗೂ ಮಕ್ಕಳಿದ್ದಾರೆ. ಅವರ ಭವಿಷ್ಯ ನೋಡಿಕೊಳ್ಳಿ ಎಂದು ಪೊಲೀಸರು ಧಮ್ಕಿ ಹಾಕುತ್ತಾರೆ. ಪ್ರತಿಭಟಿಸುವ ಹಕ್ಕನ್ನು ಕಸಿಯಲು ಅವರಾರು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
5 ಲಕ್ಷ ರೂ. ಪರಿಹಾರ ಘೋಷಿಸಿದ ಜಿಲ್ಲಾಡಳಿತ
ಸ್ಥಳಕ್ಕೆ ನಗರಸಭೆ ಪೌರಾಯುಕ್ತರು ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸ್ಥಳಕ್ಕೆ ಎಸಿ ಎಚ್.ಬಿ.ಚನ್ನಪ್ಪ ಹಾಗೂ ಪೌರಾಯುಕ್ತ ಪರಶುರಾಮ ಚಲವಾದಿ ಆಗಮಿಸಿ, ಸಾರ್ವಜನಿಕರ ಅಹವಾಲು ಆಲಿಸಿದರು. ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಾಲಕನ ಸಾವಿಗೆ ನೀವೇ ಹೊಣೆಗಾರರು ಎಂದು ದೂರಿದರು.
ಶುಕ್ರವಾರವೇ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ವಿತರಿಸಲಾಗುವುದು. ಗುತ್ತಿಗೆದಾರರಿಂದ 1 ಲಕ್ಷ ರೂ. ದಂಡ ಪರಿಹಾರ ಕೊಡಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಶಿವಾಜಿ ನಗರಕ್ಕೆ ಚರಂಡಿ ನಿರ್ಮಿಸಲಾಗವುದು ಎಂದು ಭರವಸೆ ಕೊಟ್ಟರು. ಶುಕ್ರವಾರ ಸಮಸ್ಯೆ ಬಗೆಹರಿಸದಿದ್ದರೆ, ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಹೇಳಿ ಸಾರ್ವಜನಿಕರು ಪ್ರತಿಭಟನೆ ವಾಪಸ್ ಪಡೆದರು.
ಮೂರು ಗಂಟೆ ಬಳಿಕ ಶವ ಪತ್ತೆ
ಗಿರಿಯಾಸ್ ಮಳಿಗೆ ಎದುರು ಕಾಲುವೆಯಲ್ಲಿ ಬಿದ್ದಿದ್ದ ಬಾಲಕನ ಶವ ಸುಮಾರು 50 ಅಡಿ ದೂರದಲ್ಲಿ ಹಿತ್ತಲಮನಿ ಆಸ್ಪತ್ರೆ ಎದುರು ಪತ್ತೆಯಾಯಿತು. ಜೆಸಿಬಿಯಿಂದ ಕಲ್ಲು ತೆಗೆದು ಬಾಲಕನ ದೇಹ ಹೊರಕ್ಕೆ ತೆಗೆಯಲಾಯಿತು. ಬಾಲಕ ಬದುಕಿರಬಹುದು ಎಂದು ಕೂಡಲೇ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಅಷ್ಟರಲ್ಲಾಗಲೇ ಆತನ ಜೀವ ಹೋಗಿದೆ ಎಂದು ವೈದ್ಯರು ಖಚಿತಪಡಿಸಿದರು. ಸಂಜೆ 4 ಗಂಟೆ ಸುಮಾರು ಬಾಲಕನ ಅಂತ್ಯಕ್ರಿಯೆ ನೆರವೇರಿಸಲಾಯಿತು.