ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

hvr yoga
Published on

ಹಾವೇರಿ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ಸಿಂಧಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನಗರದಲ್ಲಿ ಸೋಮವಾರ ಯೋಗ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಾಥಾಗೆ ಚಾಲನೆ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ ಮಾತನಾಡಿ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಯೋಗಾಭ್ಯಾಸ ರೂಢಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಜೂ. 21ರಂದು ನಗರದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಸಕ್ತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಜಾಥಾ ಜೆ.ಪಿ. ವೃತ್ತ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿ, ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಯೋಗ ಕುರಿತು ಜಾಗೃತಿ ಮೂಡಿಸಲಾಯಿತು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ಕ್ರೀಡಾಂಗಣ ತಲುಪಿತು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಸ್., ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಸಿ.ಎನ್. ಗೌಡರ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಾಳೆ
ಹಾವೇರಿ:
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜೂ. 21ರಂದು ಬೆಳಗ್ಗೆ 7 ಗಂಟೆಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಸಲೀಂ ಅಹ್ಮದ್ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net