ದೇವಾಲಯಗಳಿಂದ ದೇಹ, ಮನಸು ಶುದ್ದಿ; ಕನವಳ್ಳಿ ಗ್ರಾಮದ ಸಾಯಿಬಾಬಾ ದೇಗುಲ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ

25 HVR 7
Published on

ಹಾವೇರಿ: ದೇವಾಲಯಗಳು ದೇಹ, ಮನಸು ಶುದ್ದ ಮಾಡುವ ಭಕ್ತಿ ಕೇಂದ್ರಗಳಾಗಿವೆ ಎಂದು ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಕನವಳ್ಳಿ ಗ್ರಾಮದ ಮೆಹಬೂಬನಗರ 2ನೇ ಕ್ರಾಸ್‌ನಲ್ಲಿ ಶುಕ್ರವಾರ ನೂತನ ಶ್ರೀ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಭಕ್ತಿ, ಶ್ರದ್ಧೆ, ಸಂಸ್ಕಾರ, ಸಂಸ್ಕೃತಿ, ಸಂಧಾನಗಳನ್ನುಂಟು ಮಾಡುವ ಹಾಗೂ ಶಾಂತಿ, ಸಮಾಧಾನ ನೀಡುವ ಕ್ಷೇತ್ರಗಳೇ ದೇವಾಲಯಗಳಾಗಿವೆ. ಈ ನಿಟ್ಟಿನಲ್ಲಿ ಕನವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಸಾಯಿಬಾಬಾ ಮಂದಿರವು ಗ್ರಾಮಸ್ಥರ ಭಕ್ತಿ ಭಾವಗಳಿಗೆ ಸ್ಪಂದಿಸುವ ಮುಕ್ತಿ ಮಂದಿರವಾಗಿ ಹೊರಹೊಮ್ಮಲಿ. ಗ್ರಾಮದ ಸದ್ಭಕ್ತರ ಆಶೋತ್ತರಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಲಿ ಎಂದು ನುಡಿದರು.

ನಂತರ ಗ್ರಾಮದ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಶ್ರೀಸಾಯಿ ಲಕ್ಷ್ಮಣ, ಹನುಮಂತಪ್ಪ ಬಸಾಪುರ, ಹೊನ್ನಪ್ಪ ಭರಡಿ, ರಮೇಶ ಕರಿಯಮ್ಮನವರ, ಜಗದೀಶ ಹರಮಗಟ್ಟಿ, ಪ್ರಕಾಶ ಬಡಿಗೇರ, ಚನ್ನಪ್ಪ ಕೋಣನವರ, ನಾಗರಾಜ ಪಿಸೆ, ಕನವಳ್ಳಿ, ಭರಡಿ, ಶಿಬಾರ, ಹನುಮನಹಳ್ಳಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net