

ರೋಣ: ಯೋಗದಿಂದ ಏಕಾಗ್ರತೆ, ಜ್ಞಾಪಕ ಶಕ್ತಿ, ಜ್ಞಾನ ಶಕ್ತಿ, ಸದೃಢ ಆರೋಗ್ಯ ವೃದ್ಧಿಯಾಗುತ್ತದೆೆ. ನಿತ್ಯ ಜೀವನದಲ್ಲಿ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಹೇಳಿದರು.
ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಯೋಗಾಮೃತ ವತಿಯಿಂದ ಜರುಗಿದ ಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗ್ಗೆ, ಸಂಜೆ ಯೋಗ, ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳಲ್ಲಿ ತೊಡಗಿಸಿಕೊಂಡರೆ ದಿನಪೂರ್ತಿ ಲವಲವಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ ಎಂದರು.
ಸಾನ್ನಿಧ್ಯವನ್ನು ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಮಾತನಾಡಿ, ಪ್ರತಿದಿನ ಯೋಗ ಮಾಡುವುದರಿಂದ ಅಷ್ಟ ಸಿದ್ಧಿಗಳು, ನೆಮ್ಮದಿ ಮತ್ತು ಸಂತೋಷ ಪ್ರಾಪ್ತಿಯಾಗುತ್ತದೆ ಎಂದರು. ಬಸವ ಯೋಗ ಸಮಿತಿ ಅಧ್ಯಕ್ಷ ಶೇಖಣ್ಣ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಬಿ. ಧನ್ನೂರ, ಡಾ.ಐ.ಬಿ. ಕೊಟ್ಟೂರಶೆಟ್ಟರ್, ಶೇಖಣ್ಣ ಐಹೊಳ್ಳಿ, ಸಿದ್ರಾಮಯ್ಯ ಹಿರೇಮಠ, ರಾಘವೇಂದ್ರ ಮಡಿವಾಳರ, ಗೀತಾ ಇಟಗಿ, ಶಿಲ್ಪಾ ನವಲಗುಂದ, ಇತರರಿದ್ದರು. ಡಾ. ರಾಘವೇಂದ್ರ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.