

ಮೈಸೂರು: ಕುವೆಂಪು ವಿಚಾರವನ್ನು ಜನರು ಸೇರಿದಂತೆ ಪ್ರಜ್ಞಾವಂತರೂ ಅರ್ಥ ಮಾಡಿಕೊಂಡಿಲ್ಲ, ಅದನ್ನು ಅಪ್ಪಿಕೊಳ್ಳಲಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಬೇಸರ ವ್ಯಕ್ತಪಡಿಸಿದರು.
ಜಾಗೃತ ಕರ್ನಾಟಕ ವೇದಿಕೆ ವತಿಯಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ-50’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ಬಹಳಷ್ಟು ಜನರಿಗೆ ಅರ್ಥವಾಗಿಲ್ಲ. ಅವರ ವಿಚಾರಗಳು ಸಮಾಜದಲ್ಲಿ ಹರಡಿಲ್ಲ. ಇದಕ್ಕೆ ಶಿಕ್ಷಣ ಮತ್ತು ವೈಚಾರಿಕೆ ಕೊರತೆ ಕಾರಣ ಎಂದರು.
‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ’ ಎಂಬ ಕುವೆಂಪು ಮಾತು ಪಾಲನೆಯಾಗುತ್ತಿಲ್ಲ. ಬದಲಿಗೆ ಮೌಢ್ಯಕ್ಕೆ ಸಮಾಜ ದಾಸವಾಗುತ್ತಿದೆ. ಹೀಗಾಗಿ ನಾವುಗಳೆಲ್ಲ ಕುವೆಂಪು ಅವರನ್ನು ಮರೆತು ಬಿಟ್ಟಿದ್ದೇವೆಯೇ? ಎಂಬ ಅನುಮಾನದ ಪ್ರಶ್ನೆ ಕಾಡುತ್ತಿದೆ ಎಂದರು.
ಮಂಡ್ಯದ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಸರಿಯಲ್ಲ. ಕುವೆಂಪು, ಅಂಬೇಡ್ಕರ್ ಓದಿಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಈ ರೀತಿಯ ದಡ್ಡತನದ ಕೆಲಸ ಮಾಡಿ ಮೌಢ್ಯ ಪ್ರದರ್ಶಿಸುತ್ತಿರಲಿಲ್ಲ ಎಂದು ಕಿಡಿಕಾರಿದರು.
ಈಗ ಧರ್ಮ-ದೇವರ ಹೆಸರಿನಲ್ಲಿ ಏನು ಬೇಕಾದರೂ ಆಗಬಹುದು. ಯಾವುದು ಸರಿ, ಯಾವುದು ತಪ್ಪು ಎಂಬ ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಳ್ಳಲಾಗಿದೆ. ಇದಕ್ಕೆ ಕಾರಣ ರಾಜಕೀಯ. ಗುಲಾಮಗಿರಿ ಮನಸ್ಥಿತಿಗೆ ಹೊಂದಿಕೊಂಡು ಸ್ವಂತ ಆಲೋಚನೆಯೇ ಮರೆತು ಹೋಗಿದೆ. ಜಾತ್ಯತೀಯ ಮನೋಭಾವವೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿ’ ಎಂಬ ಸದೇಶ ಮತ್ತು ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಭಾಷಣವನ್ನು ಇದೇ ಸಭಾಂಗಣದಲ್ಲಿ ಕುವೆಂಪು ಮಾಡಿದ್ದರು ಎಂದು ಸ್ಮರಿಸಿಕೊಂಡ ಅವರು, ಕುವೆಂಪು ಅವರನ್ನು ಓದಿಕೊಂಡು ಅರ್ಥೈಸಿಕೊಳ್ಳದಿದ್ದರೆ ಮತ್ತೆ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.