ಜೀವ ಪಣಕ್ಕಿಟ್ಟು ಬಸ್ ಹತ್ತಬೇಕ್ರಿ...ವಿದ್ಯಾರ್ಥಿಗಳ ಅಳಲು

KSRTC BUS
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

‘ಜೀವದ ಹಂಗು ತೊರೆದು ಬಸ್ ಹತ್ತಬೇಕ್ರಿ. ಫುಲ್ ರಶ್ ಆಗಿ ಬಸ್ ಬರ್ತಾವು.. ಅದ್ರಾಗ ಹತ್ತಾಕ ಜಾಗ ಇರಾಂಗಿಲ್ಲ. ಹಿಂಗಾದ್ರ ನಾವು ಹ್ಯಾಂಗ್ ಬಸ್ ಹತ್ತಬೇಕು? ಬಸ್ ಸಲುವಾಗಿ ಕಾಲೇಜೇ ಬೇಡ ಅನಸಾಕ ಹತೆôತ್ರಿ...’

ಇದು ತಾಲೂಕಿನ ಗ್ರಾಮೀಣ ಭಾಗದಿಂದ ಪ್ರತಿನಿತ್ಯ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಬೇಸರದ ನುಡಿಗಳು...

ಹೌದು! ರಾಜ್ಯ ಸರ್ಕಾರ ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಜಿಲ್ಲೆಯಾದ್ಯಂತ ಸರ್ಕಾರಿ ಬಸ್​ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಇದರಿಂದ ನಿತ್ಯವೂ ಶಾಲಾ, ಕಾಲೇಜ್​ಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಹತ್ತಲು ಹರಸಾಹಸ ಪಡುವಂತಾಗಿದೆ.

ತಾಲೂಕಿನಲ್ಲಿ 108 ಗ್ರಾಮಗಳಿವೆ. ತಾಲೂಕು ಸಾರಿಗೆ ಘಟಕದಲ್ಲಿ 119 ಬಸ್​ಗಳಿದ್ದು, ಅದರಲ್ಲಿ 114 ಬಸ್​ಗಳನ್ನು ರಾಜ್ಯ, ಅಂತಾರಾಜ್ಯ ಹಾಗೂ ತಾಲೂಕಿನ ಗ್ರಾಮೀಣ ಭಾಗದ ರೂಟ್​ಗಳಿಗೆ ಬಿಡಲಾಗಿದೆ.

ಬಹುತೇಕ ಗ್ರಾಮದ ವಿದ್ಯಾರ್ಥಿಗಳು ಹೈಸ್ಕೂಲ್​ನಿಂದ ಹಿಡಿದು ಕಾಲೇಜ್​ವರೆಗೂ ರಾಣೆಬೆನ್ನೂರ ನಗರದ ಶಿಕ್ಷಣ ಸಂಸ್ಥೆಗಳನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಭಾನುವಾರ ಒಂದು ದಿನ ಹೊರತು ಪಡಿಸಿ ನಿತ್ಯವೂ ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಬಂದು ಹೋಗುತ್ತಾರೆ.

ರಾಜ್ಯ ಸರ್ಕಾರ ಶಕ್ತಿ ಯೋಜನೆ ಘೋಷಿಸಿದ ದಿನದಿಂದ ನಿತ್ಯವೂ ಗ್ರಾಮೀಣ ಭಾಗದಿಂದ ಬರುವ ಬಸ್​ಗಳು ಮಹಿಳೆಯರಿಂದ ತುಂಬಿರುತ್ತವೆ. ಇದರಿಂದಾಗಿ ಶಾಲಾ ಕಾಲೇಜ್​ಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಜಾಗ ಇಲ್ಲದಂಥ ಪರಿಸ್ಥಿತಿ ನಿರ್ವಣವಾಗಿದೆ.

ತಾಲೂಕಿನ ದೊಡ್ಡ ಗ್ರಾಮಗಳಾದ ಮೇಡ್ಲೇರಿ, ತುಮ್ಮಿನಕಟ್ಟಿ, ಹಲಗೇರಿ ಸೇರಿ ಇತರ ಊರುಗಳಿಂದ ಬರುವ ಬಸ್​ಗಳಲ್ಲಿ ನಿತ್ಯವೂ ಜಾಗ ಇರುವುದಿಲ್ಲ. ಹೀಗಾಗಿ ಈ ಭಾಗದಿಂದ ಶಾಲೆ, ಕಾಲೇಜ್​ಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಆಗದೆ ಪರಿತಪಿಸುತ್ತಿದ್ದಾರೆ.

ಪ್ರತ್ಯೇಕ ಬಸ್ ಕಲ್ಪಿಸಿ

ವಿದ್ಯಾರ್ಥಿಗಳು ಬಸ್​ನಲ್ಲಿ ಜಾಗವಿಲ್ಲದ ಕಾರಣ ಖಾಸಗಿ ವಾಹನ ಹಿಡಿದು ನಗರಕ್ಕೆ ಹೋಗುವ ಸ್ಥಿತಿ ನಿರ್ವಣವಾಗಿದೆ. ಖಾಸಗಿಯವರು ಸಾಕಷ್ಟು ಸೀಟ್ ಆಗುತ್ತಿಲ್ಲ ಎಂದು ಅಲ್ಲಲ್ಲಿ ನಿಂತು ಜನರನ್ನು ಕೂಗಿ ಕರೆದು ವಾಹನ ಭರ್ತಿ ಮಾಡಿಕೊಳ್ಳುತ್ತ ಹೋಗುವುದಿದೆ. ಇದರಿಂದಾಗಿ ತಾಲೂಕು ಕೇಂದ್ರ ತಲುಪಲು ತಡವಾಗುತ್ತದೆ. ಆದ್ದರಿಂದ ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಶಾಲಾ-ಕಾಲೇಜ್ ಸಮಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು, ಪಾಲಕರು ಒತ್ತಾಯಿಸಿದ್ದಾರೆ.

ಅಪಾಯಕಾರಿ ಪ್ರಯಾಣ

ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲೇಬೇಕು ಎನ್ನುವ ವಿದ್ಯಾರ್ಥಿಗಳು ಬಸ್​ನಲ್ಲಿ ಜಾಗವಿಲ್ಲದ ಕಾರಣ ಬಾಗಿಲಲ್ಲಿ ಹಾಗೂ ಫುಟ್​ಬೋರ್ಡ್ ಮೇಲೆ ನಿಂತು ಹೋಗುತ್ತಿರುವ ದೃಶ್ಯಗಳು ನಿತ್ಯವೂ ಕಂಡು ಬರುತ್ತಿವೆ. ಬಾಲಕಿಯರು ಸಹ ಬಾಗಿಲಲ್ಲಿ ನಿಂತು ಸಾಹಸದ ಪ್ರಯಾಣ ಮಾಡುವುದು ಭಯ ಹುಟ್ಟಿಸುತ್ತವೆ. ಇತ್ತೀಚೆಗೆ ಹಾನಗಲ್ಲ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಬಸ್ ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸುವಾಗ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆದ್ದರಿಂದ ಸಾರಿಗೆ ಅಧಿಕಾರಿಗಳು ಕೂಡಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಸಾರಿಗೆ ಘಟಕದಲ್ಲಿರುವ ಎಲ್ಲ ಬಸ್​ಗಳನ್ನು ರೂಟ್​ಗೆ ಓಡಿಸಲಾಗುತ್ತಿದೆ. ನಮಗೆ ಹೆಚ್ಚುವರಿ ಬಸ್​ಗಳ ಅವಶ್ಯವಿದೆ. ಇರುವ ಬಸ್​ಗಳನ್ನು ಶಾಲಾ ಕಾಲೇಜ್ ಮಕ್ಕಳಿಗೆ ತೊಂದರೆಯಾಗಬಾರದೆಂದು ಬಿಟ್ಟಿದ್ದೇವೆ. ಆದರೆ, ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳಲ್ಲೇ ಪ್ರಯಾಣಿಸುತ್ತಿರುವುದರಿಂದ ಶಾಲಾ-ಕಾಲೇಜ್ ಮಕ್ಕಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಘಟಕಕ್ಕೆ ಹೆಚ್ಚುವರಿ ಬಸ್ ಬರುವವರೆಗೂ ಮಹಿಳೆಯರು ಹಾಗೂ ಇತರ ಪ್ರಯಾಣಿಕರು ಶಾಲಾ-ಕಾಲೇಜ್ ಮಕ್ಕಳಿಗೆ ತೊಂದರೆಯಾಗದಂತೆ ಸಹಕರಿಸಬೇಕು.

| ಎಸ್. ಶಿವಮೂರ್ತಿ, ಸಾರಿಗೆ ಘಟಕದ ವ್ಯವಸ್ಥಾಪಕ, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net