ಮೂರು ಮಕ್ಕಳನ್ನು ಹೆತ್ತು ಹಿಂದುಗಳ ಸಂಖ್ಯೆ ಹೆಚ್ಚಿಸಿ

New Togadiay 1 New 1
Published on

ಹುಬ್ಬಳ್ಳಿ : ಹಿಂದುಗಳು ಜನಸಂಖ್ಯೆ ಹೆಚ್ಚಳಕ್ಕೆ ಮುಂದಾಗಬೇಕು. ಪ್ರತಿ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೆರಬೇಕು. ಮೂರನೇ ಮಗುವಿಗೆ ಅಂತಾರಾಷ್ಟ್ರೀಯ ಹಿಂದು ಪರಿಷತ್​ನಿಂದ ಶಿಕ್ಷಣಕ್ಕೆ ಬೇಕಾದ ನೆರವು ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಹಿಂದು ಪರಿಷತ್​ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಹೇಳಿದರು.

ಅಂತಾರಾಷ್ಟ್ರೀಯ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ‘ಸ್ವಾಸ್ಥ್ಯ ಹಿಂದು, ಸುರಕ್ಷಿತ ಹಿಂದು, ಸಮೃದ್ಧ ಹಿಂದು ಎಂಬ ಸಂಕಲ್ಪದೊಂದಿಗೆ’ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಹಿಂದು ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಮುಸ್ಲಿಮರು ಜನಸಂಖ್ಯೆ ನಿಯಂತ್ರಣ ಗಾಳಿಗೆ ತೂರಿ, ಮನಬಂದಂತೆ ಮಕ್ಕಳನ್ನು ಹೆರುತ್ತಿದ್ದಾರೆ. ಆದರೆ, ಹಿಂದುಗಳು ಕಾನೂನು ಪಾಲಿಸುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಕಾನೂನು ಉಲ್ಲಂಘಿಸಿ, ಮಕ್ಕಳನ್ನು ಹೆರುವವರಿಗೆ ಸರ್ಕಾರಿ ಸೌಲಭ್ಯ ಸಿಗಬಾರದು. ಅಂತಹ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ, ಶೈಕ್ಷಣಿಕ ಸೌಲಭ್ಯಗಳನ್ನು ನೀಡಬಾರದು ಎಂದು ತಿಳಿಸಿದರು.

ಹಿಂದುಗಳು ಸುರಕ್ಷಿತವಾಗಿರಬೇಕು, ಸಮೃದ್ಧರಾಗಿರಬೇಕು. ಇದಕ್ಕಾಗಿ ಹಿಂದು ವ್ಯಾಪಾರಸ್ಥರಿಂದಲೇ ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಬೇಕು. ಇದರಿಂದ ಹಿಂದು ವ್ಯಾಪಾರಸ್ಥರಿಗೆ ತಮ್ಮ ಉದ್ಯೋಗ ಬೆಳೆಸಲು ಅನುಕೂಲವಾಗುತ್ತದೆ ಎಂದರು.

ಮತಾಂತರಕ್ಕೆ ಬಡತನವಷ್ಟೇ ಕಾರಣವಲ್ಲ. ಬದಲಾಗಿ, ಧರ್ಮದ ಬಗ್ಗೆ ಇರುವ ಅರಿವಿನ ಕೊರತೆಯೂ ಕಾರಣ. ಮುಸ್ಲಿಮರಲ್ಲಿಯೂ ಬಡವರಿದ್ದಾರೆ. ಅವರೇಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದ ತೊಗಾಡಿಯಾ, ಮುಸ್ಲಿಮರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಅದೇ ರೀತಿ, ಹಿಂದುಗಳಲ್ಲಿಯೂ ನಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net