

ಬಂಕಾಪುರ: ಸಂಕಲ್ಪದಿಂದ ಸಿದ್ಧಿ ಮಾಡಲು ಸಾಧ್ಯವಿದೆ. ಸಂಕಲ್ಪದ ಜತೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮ, ಸ್ಪಷ್ಟ ಗುರಿ, ಗುರಿ ಮುಟ್ಟುವ ಛಲ ಇದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ 2022-23ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅದೃಷ್ಟ ಹುಡುಕುತ್ತ ಹೋದವರು ಯಾರೂ ಯಶಸ್ವಿಯಾಗಿಲ್ಲ. ಕಠಿಣ ಪರಿಶ್ರಮದಿಂದ ಅದೃಷ್ಟವನ್ನು ಮನೆ ಬಾಗಿಲಿಗೆ ತಂದುಕೊಂಡವರು ಮಾತ್ರ ಯಶಸ್ವಿಯಾಗುತ್ತಾರೆ ಎಂದರು.
21ನೇ ಶತಮಾನ ಜ್ಞಾನದ ಶತಮಾನ. ಇಲ್ಲಿ ಯಾರ ಹತ್ತಿರ ಜ್ಞಾನವಿದೆಯೋ ಅವರು ಜಗತ್ತನ್ನು ಆಳುತ್ತಾರೆ. ಬುದ್ಧಿವಂತಿಕೆಯಲ್ಲಿ ಯಾರೂ ಕಡಿಮೆ ಇರುವುದಿಲ್ಲ. ನಿಮಗೆ ನಿಮ್ಮ ಮೇಲೆ ವಿಶ್ವಾಸವಿರಬೇಕು. ಅಂದಾಗ ಮಾತ್ರ ಗೆಲುವು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುನ್ನ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ ವಿಭಾಗ) ಡಾ.ಎಸ್.ಟಿ ಬಾಗಲಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಡಾ.ಚಂದ್ರಾನಾಯ್ಕ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಸುರೇಶ ಕುಂಭಾರ, ಶಿವಾನಂದ ಮ್ಯಾಗೇರಿ, ನವೀನ ಸವಣೂರ, ವಿಶ್ವನಾಥ ಹರವಿ, ಬಸವರಾಜ ನಾರಾಯಣಪುರ, ಹೊನ್ನಪ್ಪ ಹೂಗಾರ, ಶಂಭಣ್ಣ ಕಡಕೋಳ, ಡಾ.ದಿನೇಶಪ್ಪ ಶಿಂಗಾಪುರ, ಲುಬ್ನಾನಾಝ್ ಪೀರಜಾದೆ, ಮಂಜುನಾಥ ನಾಯ್ಕ, ಡಾ.ಸುಭಾಸ ರಾಜಮಾನೆ, ನಿಂಗಪ್ಪ ಕಲಕೋಟಿ, ವಿಜಯಲಕ್ಷ್ಮಿ ಸಿ., ಡಾ.ವಿಜಯಕುಮಾರ ಗುಡಗೇರಿ, ಡಾ.ಉಮೇಶ ಕರ್ಜಗಿ, ಶಂಭುಲಿಂಗ ದೇವಸೂರ, ಮಹೇಶ ಡಮನಾಳ ವಿದ್ಯಾರ್ಥಿ ಪ್ರತಿನಿಧಿಗಳಾದ ಮಣಿಕಂಠ ಜೋಗಿನ್, ಶೈಲಾ ಬಂಗಿ, ಹರ್ಷಾ ಮಾಮ್ಲೇಪಟ್ಟಣಶೆಟ್ಟರ, ಮಾಲತಿ ಕುಂಬಳೇಪ್ಪನವರ, ಸ್ವಪ್ನಿಲ್ ಬನ್ನೆ, ಸುಹಾನಾ ಶಿಗ್ಲಿ ಮತ್ತಿತರರು ಉಪಸ್ಥಿತರಿದ್ದರು.