

ವಿಜಯವಾಣಿ ಸುದ್ದಿಜಾಲ ಧಾರವಾಡ
ಹನ್ನೆರಡನೇ ಶತಮಾನದ ಶರಣರ ನಿಷ್ಕಲ್ಮಶ ಮತ್ತು ಪರಿಶುದ್ಧ ಕಾಯಕ ತತ್ವವೇ ಸಹಕಾರಿ ತತ್ವಕ್ಕೆ ಪ್ರೇರಣೆ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.
ನಗರದ ಕೆಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ, ನಿವೃತ್ತರ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರು ಪರಿಶುದ್ಧ ಕಾಯಕಕ್ಕೆ ಮಹತ್ವ ನೀಡಿದರು. ನಾವು ಮಾಡುವ ಕೆಲಸದಲ್ಲಿ ಒಳ್ಳೆ ಉದ್ದೇಶ ಇರಬೇಕಲ್ಲದೆ, ಕೆಲಸದ ಬಗ್ಗೆ ಗೌರವ ಇರಬೇಕು. ಸಮಾನತೆ ಮತ್ತು ಜಾತ್ಯತಿತ ತತ್ವವನ್ನು ಕಾಯಕದಲ್ಲಿ ಕಾಣಬೇಕು. ಅಂತಹ ಕಾಯಕವನ್ನು ಪ್ರತಿಯೊಬ್ಬರೂ ಮಾಡಬೇಕು. ಇದೇ ತತ್ವ ಸಹಕಾರ ವಲಯದಲ್ಲಿದೆ. ಹೀಗಾಗಿ ವೃತ್ತಿ ಮೇಲಿನ ಗೌರವ ಉಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
ಕೆಸಿಸಿ ಬ್ಯಾಂಕ್ ಆಥಿರ್ಕವಾಗಿ ಸದೃಢವಾಗಿದ್ದು, ಲಾಭದತ್ತ ಮುನ್ನಡೆಯುತ್ತಿದೆ. ಈ ವರ್ಷ 25 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ ಹೊಂದಿದ್ದು, ಈ ಗುರಿ ತಲುಪಲು ನೌಕರರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಶಾಂತವೀರಪ್ಪ ಮೆಣಸಿನಕಾಯಿ, ಅರಟಾಳ ರುದ್ರಗೌಡರಂತಹ ಮಹನೀಯರು ಸಮಾಜದ ಒಳಿತಿಗಾಗಿ ಬ್ಯಾಂಕ್ ಸ್ಥಾಪಿಸುವ ಮಹತ್ಕಾರ್ಯ ಮಾಡಿದ್ದಾರೆ. ಈ ಭಾಗದ ಜನರ ಆರ್ಥಿಕ ಬದುಕು ಸುಧಾರಣೆಗೆ ಕೊಡುಗೆ ನೀಡಿರುವ ಅವರು ಸದಾ ಪ್ರಾತಃಸ್ಮರಣೀಯರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಸಂಘದ ಅಧ್ಯಕ್ಷ ಎಸ್.ವಿ.ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡರ, ನಿರ್ದೇಶಕ ಸಿದ್ದಪ್ಪ ಸಪೂರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಸುನಿತಾ ಸಿದ್ರಾಮ, ಸಂಘದ ಉಪಾಧ್ಯಕ್ಷ ಶಿವಾನಂದ ಆಲದಕಟ್ಟಿ, ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.
ನಿವೃತ್ತ ಸದಸ್ಯರಿಗೆ ಬೀಳ್ಕೊಡುಗೆ ಮತ್ತು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಸಿ.ಡಿ. ಮಲ್ಲಾಪುರ ಸ್ವಾಗತಿಸಿದರು. ಮಹಾರಾಜ ಪಾಟೀಲ ನಿರೂಪಿಸಿದರು.