

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನಾಡಿಗೆ ಸುಮಾರು 7000 ವರ್ಷಗಳ ಇತಿಹಾಸವಿದ್ದರೆ, ನುಡಿಗೆ 3000 ಹಾಗೂ ಕನ್ನಡ ಲಿಪಿಗೆ 2000 ವರ್ಷಗಳ ಇತಿಹಾಸವಿದೆ ಎಂದು ಯುವ ಸಾಹಿತಿ ಡಾ. ಶಿವಾನಂದ ಟವಳಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ಸಂಭ್ರಮ-50 ನಿಮಿತ್ತ ಮಂಗಳವಾರ ಆಯೋಜಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಮೂಲದಲ್ಲಿ ಹರಪ್ಪ ಸಂಸ್ಕೃತಿಯ ಜನಾಂಗವು ವಲಸೆಗೊಂಡು ದಕ್ಷಿಣ ಭಾರತದಲ್ಲಿ ಶಾಶ್ವತ ನೆಲೆ ಕಂಡುಕೊಂಡರು. ಅವರು ಆರಂಭದಲ್ಲಿ ಬಳಸಿದ ದ್ರಾವಿಡ ಭಾಷೆಯು ನಂತರ ನಾಲ್ಕು ಭಾಷೆಗಳಾಗಿ ರೂಪಗೊಂಡವು. ಅದರಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಪ್ರಪಂಚದ ಕೆಲವೇ ಕೆಲವು ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆದಿದ್ದು, ಅದರಲ್ಲಿ ಕನ್ನಡವೂ ಒಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಎಸ್.ಎಸ್. ಅಂಗಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿ.ವಿ.ಕಣಬರ್ಗಿ ಮಾತನಾಡಿ, ಕನ್ನಡ ಭಾಷೆ ಪ್ರೀತಿಸಿ, ಅಭಿಮಾನ ಪಡಬೇಕೆ ಹೊರತು ಅಸಡ್ಡೆ ಪಡಬಾರದು. ಅನ್ಯಭಾಷಿಕರ ಪ್ರೀತಿ, ಅಭಿಮಾನವನ್ನು ನಾವು ಅರಿಯಬೇಕು ಎಂದರು.
ಹರ್ಲಾಪುರ ಸಾಂಸ್ಕೃತಿಕ ಕೇಂದ್ರದ ಕಲಾವಿದರಾದ ಈಶ್ವರ ಅರಳಿ, ಶರೀಫ್ ದೊಡಮನಿ, ನಾಗರಾಜ ಹಾಗೂ ಸಂಗಡಿಗರು ಕನ್ನಡ ನಾಡು, ನುಡಿ ಗೀತೆ ಪ್ರಸ್ತುತಪಡಿಸಿದರು. ಎಂ.ಬಿ. ಕೋಟೂರ, ಡಾ. ಎಸ್.ಎಸ್. ಭಗವತಿ, ಡಾ. ರಶ್ಮಿ ತುರಮರಿ, ಗಿರಿಜಾ ಮೂಲಿಮನಿ, ಜ್ಯೋತಿ ಕಾಡದೇವರಮಠ, ಕಾಲೇಜು ವಿದ್ಯಾರ್ಥಿಗಳು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.