

ಹುಣಸೂರು: ಎಲ್ಲ ಸರ್ಕಾರಿ ಇಲಾಖೆಗಳ ಮಾತೃಸಂಸ್ಥೆಯಾದ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಂದಾಯ ಇಲಾಖೆ ರೈತರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವ ಕೇಂದ್ರ ಇಲಾಖೆ. ರೈತರು ಮತ್ತು ಸಾರ್ವಜನಿಕರು ಇಲ್ಲಿಗೆ ಬಂದಾಗ ಅವರ ಸಮಸ್ಯೆಗಳ ಪರಿಹಾರಕ್ಕೆ ಕಾನೂನಾತ್ಮಕ ಅಂಶಗಳೊಂದಿಗೆ ಉತ್ತಮ ನಡವಳಿಕೆಯೂ ನಿಮ್ಮಲ್ಲಿ ಇರಲಿ. ಪರಿಹಾರ ಕಾಣದ ಯಾವುದೇ ಸಮಸ್ಯೆ ಇಲ್ಲ. ಪರಿಹಾರದ ದಾರಿ ಹುಡುಕುವುದು ಅಗತ್ಯ. ಇಲಾಖೆ ಇದೀಗ ಡಿಜಿಟಲೀಕರಣ ವ್ಯವಸ್ಥೆಯತ್ತ ಸಾಗುತ್ತಿದೆ. ಇಲಾಖೆಯಲ್ಲಿ ಪ್ರತಿಯೊಬ್ಬರಿಗೂ ಟಾರ್ಗೆಟ್ ನೀಡಿ ಕೆಲಸ ಮಾಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನೀವು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಕಾರ್ಯ ಸುಲಭ ಸಾಧ್ಯ. ಹಾಗಾಗಿ ನಿಮ್ಮ ಜವಾಬ್ದಾರಿಯನ್ನು ಅರಿತು ಸಾರ್ವಜನಿಕ ಸೇವೆಯಲ್ಲಿ ಭಾಗಿಯಾಗಿರಿ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ ಮಾಡಬೇಕಿದೆ. ದುರಸ್ತು, ಪೋಡು ಮುಂತಾದ ಕಾರ್ಯಗಳನ್ನು ಆಂದೋಲನದ ಮೂಲಕ ನಡೆಸಿ ಮನೆ ಬಾಗಿಲಿಗೆ ದಾಖಲೆ ಪತ್ರಗಳನ್ನು ನೀಡುವಂತಾಗಬೇಕು. ನಿಮ್ಮ ವೃತ್ತಿಯಲ್ಲಿ ಶಿಸ್ತು, ಸನ್ನಡತೆ ಬೆಳೆಸಿಕೊಂಡಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಲಿದೆ ಎಂದರು.
ದಿನಾಚರಣೆ ಅಂಗವಾಗಿ ಕಂದಾಯ ಇಲಾಖೆ ಸಿಬ್ಬಂದಿಗೆ ವಿವಿಧ ಕ್ರೀಡಾಕೂಟ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್, ಗ್ರೇಡ್ 2 ತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್ ನಲವತ್ತ್‌ವಾಡಕರ್, ಗಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಸಿಬ್ಬಂದಿ ಹಾಜರಿದ್ದರು.