

ಶಿರಸಿ: ಜೀವನದುದ್ದಕ್ಕೂ ಮಾಡಿದ ಸತ್ಕರ್ಮಗಳನ್ನು ಭಗವಂತನಿಗೆ ಅರ್ಪಣೆ ಮಾಡುವ ಹಾರ್ದಿಕ ಗುಣ ಬೆಳೆಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಠದಲ್ಲಿ ಗುರುವಾರ ತಾಲೂಕಿನ ಬೆಟ್ಟಳ್ಳಿ ಭಾಗಿ ಶಿಷ್ಯರು ಚಾತುರ್ವಸ್ಯ ಅವಧಿಯಲ್ಲಿ ಸಲ್ಲಿಸಿದ ಗುರುಸೇವೆಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಯಾವುದೇ ಪೂಜೆ, ಹೋಮ ಮಾಡಿದ ಕೊನೆಯಲ್ಲಿ ದೇವರಿಗೆ ಅರ್ಪಣೆ ಮಾಡುತ್ತಾರೆ. ಕೇವಲ ಪೂಜೆ, ಹವನದ ಅರ್ಪಣೆ ಮಾತ್ರವಲ್ಲ. ಎಲ್ಲವನ್ನೂ ಭಗವಂತನಿಗೆ ಅರ್ಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಗವದ್ಗೀತೆಯಲ್ಲಿ ಒಂಬತ್ತನೇ ಅಧ್ಯಾಯದಲ್ಲಿ ಕೂಡ ಭಗವಾನ್ ಶ್ರೀಕೃಷ್ಣ ಇದನ್ನೇ ಹೇಳುತ್ತಾನೆ ಎಂದರು.
ಕರ್ಮ, ಭೋಜನ, ಯಜ್ಞ, ದಾನ, ತಪಸ್ಸು ಈ ಐದನ್ನೂ ಈಶ್ವರಾರ್ಪಣೆ ಮಾಡಬೇಕು. ಭಗವಂತನಿಗೆ ಅರ್ಪಿಸಿದರೆ ಅವನದೇ ಮೂಲಕ ತೆಗೆದುಕೊಳ್ಳುತ್ತಾನೆ. ದೇವರಿಗೆ ಸಪರ್ಮಣೆ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಸಮರ್ಪಣೆ ಮಾಡುವ ತ್ಯಾಗದ ಗುಣ ಬೆಳೆಸಿಕೊಂಡರೆ ಪುಣ್ಯ ಬರುತ್ತದೆ. ಮಾನಸಿಕವಾಗಿ ಸನ್ಯಾಸದ ಗುಣ ಕೂಡ ಬರುತ್ತದೆ. ಕರ್ಮದ ಬಂಧದಿಂದ ಪಾರಾಗಲೂ ಸಾಧ್ಯವಿದೆ. ತ್ಯಾಗವು ಮನಸ್ಸಿಗೆ ಚೆನ್ನಾಗಿ ಬರಲು ಸಮರ್ಪಣೆಯ ಹಾರ್ದಿಕ ಸ್ಥಿತಿ ಬರಬೇಕು. ಫಲ ನಮಗೇ ಸಿಗಬೇಕು ಎಂಬ ಭಾವ ಬಿಡಬೇಕು ಎಂದರು.
ನೀರ್ನಳ್ಳಿ ಸೀತಾರಾಮ ಹೆಗಡೆ, ಸತ್ಯನಾರಾಯಣ ಭಟ್ಟ, ಮಾತೃ ಮಂಡಳಿಯ ಮಾಜಿ ಅಧ್ಯಕ್ಷೆ ವೇದಾ ಹೆಗಡೆ ಇತರರಿದ್ದರು.