

ರಾಯಚೂರು: ಹಿರಿಯ ನಾಗರಿಕರು ನಿವೃತ್ತಿ ನಂತರದ ಜೀವನವನ್ನು ಸಂತೋಷದಿಂದ ಕಳೆಯುವುದರ ಜತೆಗೆ ಎಲ್ಲರೊಂದಿಗೆ ಸ್ನೇಹ ಮತ್ತು ಆತ್ಮೀಯತೆಯಿಂದ ಬಾಳಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಸಲಹೆ ನೀಡಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯ ನಾಗರಿಕರು ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಯುವ ಪೀಳಿಗೆ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದ್ದು, ಹಿರಿಯರು ತಮ್ಮ ಸಮಸ್ಯೆಗಳನ್ನು ಸಹಾಯವಾಣಿಗೆ ಕರೆ ಮಾಡಿ ಬಗೆ ಹರಿಸಿಕೊಳ್ಳಬಹುದಾಗಿದೆ.
ಸರ್ಕಾರ 100 ವರ್ಷ ಪೂರೈಸಿದ ಹಿರಿಯ ಮತದಾರರಿಗೆ ಅಭಿನಂದನಾ ಪತ್ರವನ್ನು ನೀಡುವ ಮೂಲಕ ಅವರನ್ನು ವಿಶೇಷ ರೀತಿಯಲ್ಲಿ ಕಾಣುತ್ತಿದೆ. ಹಿರಿಯರಿಗೆ ಶಾರೀರಿಕವಾಗಿ ವಯಸ್ಸಾಗಿರುತ್ತದೆ ಹೊರತು ಮಾನಸಿಕವಾಗಿ ಅಲ್ಲ. ಹೀಗಾಗಿ ಅವರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ.ಕೆ.ಆರ್.ದುರಗೇಶ ಹೇಳಿದರು.
ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಮಹೆಬೂಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲ್ಯಾಣಾಕಾರಿ ಶರಣಪ್ಪ ಪಾಟೀಲ, ಸಿಪಿಐ ನಾಗರಾಜ ಮೇಕಾ, ಮುಖಂಡರಾದ ಪವನ ಪಾಟೀಲ್, ಮಹಾದೇವಪ್ಪ ಏಗನೂರು, ಶೇಖ್ ಅಸರ್ ಉಪಸ್ಥಿತರಿದ್ದರು.