

ಸಿದ್ದಾಪುರ:
ಜಿಲ್ಲೆಯಾದ್ಯಂತ ಸೋಮವಾರ (ನ.27) ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹುತ್ತರಿಯನ್ನು ಕೊಡಗಿನವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ಮಳೆಗಾಲದಲ್ಲಿ ಬಿತ್ತಿದ ಭತ್ತ, ತೆನೆಯೊಡೆದು, ಫಸಲು ಬಂದಾಗ ಅದನ್ನು ಪೂಜಿಸಿ, ಸಂಭ್ರಮಿಸುವ ಹಬ್ಬ ಇದಾಗಿದೆ. ಹಬ್ಬದ ದಿನ ಭತ್ತದ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯವಿದೆ.
ಕೊಡವ ಭಾಷೆಯಲ್ಲಿ ಪುದಿಯ ಅರಿ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ ಎನ್ನುವದರ ಕನ್ನಡ ರೂಪಾಂತರ ಹುತ್ತರಿ. ಹುತ್ತರಿ ಹಬ್ಬವನ್ನು ರೋಹಿಣಿ ನಕ್ಷತ್ರವಿರುವ ಹಣ್ಣಿಮೆಯ ರಾತ್ರಿ ಆಚರಿಸಲಾಗುತ್ತದೆ. ಧಾನ್ಯ ಲಕ್ಷ್ಮಿಯಾದ ಭತ್ತವನ್ನು ಮನೆ ತುಂಬಿಸಿಕೊಳ್ಳುವ ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಆಚರಣೆಯ ಕಾಲವನ್ನು ಕೊಡಗಿನ ಆರಾಧ್ಯ ದೈವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಾನದಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು, ದೇವತಕ್ಕರು, ನಾಡಿನ ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು ಸೇರಿ ನಿರ್ಧರಿಸುತ್ತಾರೆ.
ಕೊಡಗಿನವರ ಪ್ರಮುಖ ದೇಗುಲವಾದ ಪಾಡಿ ಇಗ್ಗುತಪ್ಪನಿಗೆ ಕದಿರು ಕೊಯ್ದು ಮೊದಲು ಅರ್ಪಿಸುವುದು ವಾಡಿಕೆ. ಇಲ್ಲಿ ಮೊದಲ ಪೂಜೆ ಆಗಿ ಹುತ್ತರಿ ಹಬ್ಬ ಶುರುವಾದ ನಂತರ ಇಡೀ ಕೊಡಗಿನಾದ್ಯಂತ ಹುತ್ತರಿ ಆಚರಿಸಲಾಗುತ್ತದೆ. ಈ ವರ್ಷ ನಾಪೋಕ್ಲು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಜೆ 7.20ಕ್ಕೆ ನೆರೆ ಕಟ್ಟುವುದು, ರಾತ್ರಿ 8.20ಕ್ಕೆ ಕದಿರು ತೆಗೆಯುವುದು ಮತ್ತು ರಾತ್ರಿ 9.20ಕ್ಕೆ ಊಟೋಪಚಾರ ನಡೆಯುತ್ತದೆ. ನಂತರ ಕೊಡಗಿನ ಎಲ್ಲೆಡೆ ರಾತ್ರಿ 7.45ಕ್ಕೆ ನೆರೆ ಕಟ್ಟುವುದು, ರಾತ್ರಿ 8.45ಕ್ಕೆ ಕದಿರು ತೆಗೆಯುವುದು ರಾತ್ರಿ 9.45ಕ್ಕೆ ಊಟೋಪಚಾರ ನಡೆಯಲಿದೆ
ಹಬ್ಬದ ದಿನ ಸಂಜೆ ಫಲಹಾರದ ಬಳಿಕ ಸಿದ್ದಪಡಿಸಲಾದ 'ಕುತ್ತಿ'ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬAಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು 'ತಳಿಯಕ್ಕಿ ಬೊಳ್ಚ'ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.
ಗದ್ದೆ ತಲುಪಿದ ಬಳಿಕ ಹಾಲು,ಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊAದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗಲಾಗುತ್ತದೆ. ಈ ವೇಳೆ ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ
ಭತ್ತದ ಗದ್ದೆಯನ್ನು ಹೊಂದಿದವರು ತಮ್ಮ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯ ಈ ಹಬ್ಬದಲ್ಲಿದೆ. ಪೂಜಿಸಿ ತಂದ ಕದಿರನ್ನು ಐದು ಬಗೆಯ ಮರದ ಎಲೆಯ ಸುರುಳಿ ಮಧ್ಯೆ ಸೇರಿಸಿ ಕಟ್ಟಲಾಗುತ್ತದೆ. ನಂತರ ದೇವರ ಕೋಣೆಯಲ್ಲಿ ಕಟ್ಟುವುದು, ಮನೆಯಲ್ಲಿರುವ ವಾಹನ, ಆಯುಧಗಳಿಗೆ ಕಟ್ಟವ ಸಂಪ್ರದಾಯ ಹಿಂದಿನಿAದಲೂ ನಡೆದು ಬಂದಿದೆ. ಇಡೀ ಕುಟುಂಬದವರೆಲ್ಲರೂ ಒಟ್ಟಾಗಿ ಆಚರಿಸುವ ವಿಶೇಷ ಹಬ್ಬ ಇದಾಗಿದೆ.
ಹುತ್ತರಿ ಹಬ್ಬದ ವಿಶೇಷ ಹೊಸ ಅಕ್ಕಿಯ ಪಾಯಸ. ಹೊಸ ಅಕ್ಕಿಯ ಜೊತೆ ಹಾಲು, ತೆಂಗಿನ ಕಾಯಿ, ಡ್ರೈಫ್ರೂಟ್ಸ್, ಬೆಲ್ಲ ಅಥವಾ ಸಕ್ಕರೆ ಸೇರಿಸಿ ಅಕ್ಕಿ ಪಾಯಸ ತಯಾರಿಸಲಾಗುತ್ತದೆ. ಈ ಹಬ್ಬದಲ್ಲಿ ಅಕ್ಕಿಯಿಂದ ತಯಾರಿಸುವ ತಂಬಿಟ್ಟು ಸಹ ಪ್ರಮುಖ ಅಡುಗೆಯಾಗಿದೆ. ಈ ಹಬ್ಬದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊಡಗಿನ ಸಾಂಪ್ರದಾಯಕ ಉಡುಗೆ–ತೊಡುಗೆಗಳನ್ನು ಧರಿಸಿ ಕೋಲಾಟ, ಪರಿಯ ಕಳಿ ಮುಂತಾದ ಕಾರ್ಯಕ್ರಮವನ್ನು ನಡೆಸುತ್ತಾರೆ.
ವನ್ಯಜೀವಿಗಳ ಹಾವಳಿ ಇನ್ನಿತರ ಸಮಸ್ಯೆಯಿಂದ ಕೊಡಗಿನಲ್ಲಿ ಭತ್ತದ ಗದ್ದೆ ನಾಟಿ ಮಾಡುವವರು ಕಡಿಮೆ ಇದ್ದರೂ ಕೂಡ ಹುತ್ತರಿ ಹಬ್ಬದ ಸ್ವಾರಸ್ಯ ಮಾತ್ರ ಕೊಡಗಿನಲ್ಲಿ ಕಡಿಮೆಯಾಗಿಲ್ಲ ಕೊಡಗಿನಲ್ಲಿ ಇಂದಿಗೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಕೊಡಗಿನ ಮಣ್ಣಿನ ಮಕ್ಕಳ ಸುಖ ಶಾಂತಿ ಸಮೃದ್ಧಿ ಆದಿ ದೇವತೆಯ ಸಂಕೇತವಾಗಿದೆ ಹುತ್ತರಿ ಹಬ್ಬ.