ಬಿಲ್ ವಸೂಲಿಗೆ ಮುಂದಾದ ಜೆಸ್ಕಾಂ

hutti-1
ಹಟ್ಟಿಯಲ್ಲಿ ಜೆಸ್ಕಾಂ ಅಧಿಕಾರಿಗಳು ವಿವಿಧ ಮನೆಗಳಿಗೆ ತೆರಳಿ ವಿದ್ಯುತ್ ಬಿಲ್ ಬಾಕಿ ವಸೂಲಿ ಮಾಡುತಿರುವುದು.
Published on

ಹಟ್ಟಿಚಿನ್ನದಗಣಿ: ಪಟ್ಟಣ ವ್ಯಾಪ್ತಿಯಲ್ಲಿ ಎರಡು ಕೋಟಿ ರೂ. ಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಇರುವ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಮನೆಮನೆಗೆ ತೆರಳಿ ವಸೂಲಿಗೆ ಶುಕ್ರವಾರದಿಂದ ಮುಂದಾಗಿದ್ದಾರೆ.

ಮಾವಿನಬಾವಿ, ಈಚನಾಳ, ನಾಗರಾಳ ಶಾಖಾಧಿಕಾರಿಗಳನ್ನು ಹಟ್ಟಿ ಪಟ್ಟಣದಲ್ಲಿ ನೇಮಿಸಿ, ಗ್ರಾಹಕರಿಂದ ಕಳೆದ ಕೆಲ ತಿಂಗಳಿನಿಂದ ಬಾಕಿ ಬಿಲ್ ಪಾವತಿಸದ ಮನೆಗಳು, ಅಂಗಡಿಗಳು, ಬಾರ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಜೆಸ್ಕಾಂ ಇದೀಗ ವಸೂಲಿಗೆ ಮುಂದಾಗಿದೆ.

ಅಧಿಕಾರಿಗಳ ತಂಡವು ಪಟ್ಟಣದ ಪ್ರಮುಖ ಬೀದಿಗಳು ಹಾಗೂ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಬಿಲ್ ಪಾವತಿಸಲು ನೋಟಿಸ್ ನೀಡಿದ್ದು, ಪಾವತಿಸದವರ ಮನೆ, ಅಂಗಡಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

ಜೆಸ್ಕಾಂ ಕ್ರಮವನ್ನು ಪಟ್ಟಣದ ಜನತೆ ಸ್ವಾಗತಿಸಿದ್ದು, ಕೆಲವರು ಬಿಲ್ ಪಾವತಿಸಲು ವಿಳಂಬವಾದ ಕಾರಣ ಕ್ಷಮೆ ಕೋರಿ ಕಾಲಾವಕಾಶ ಕೋರಿದ್ದಾರೆ.

=======

ಗ್ರಾಹಕರು ಸಕಾಲಕ್ಕೆ ಬಿಲ್ ಪಾವತಿಸದ ಕಾರಣ ಜೆಸ್ಕಾಂಗೆ ನಷ್ಟ ಉಂಟಾಗಿದೆ. ಆದರೂ, ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನಿರಂತರವಾಗಿ ನೀಡಲಾಗಿದೆ. ಈಗ ಯಾವ ಗ್ರಾಹಕರು ವಿದ್ಯುತ್ ಬಾಕಿ ಬಿಲ್ ಪಾವತಿಸುವುದಿಲ್ಲವೋ ಅಂತಹವರ ಮನೆ ಹಾಗೂ ವ್ಯಾಪಾರ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲು ಮೇಲಧಿಕಾರಿಗಳು ಸೂಚಿಸಿದ್ದಾರೆ.

> ಬನ್ನೆಪ್ಪ ಕರಿಬಂಟನಾಳ, ಜೆಸ್ಕಾಂ ಎಇಇ, ಲಿಂಗಸುಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net