ಎನ್‌ಆರ್‌ಇಜಿ ಸಮಸ್ಯೆ ಪರಿಹರಿಸಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ಆಗ್ರಹ

PRATHIBHATANE
ಹಟ್ಟಿಚಿನ್ನದಗಣಿ ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ಮುಂದೆ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರ ಬೇಡಿಕೆಯನ್ನು ಪಿಡಿಒ ಗುರುಸಿದ್ಧಪ್ಪ ಆಲಿಸಿದರು. ಪ್ರಮುಖರಾದ ರಮೇಶ್ ವೀರಾಪೂರ್, ಲಿಂಗರಾಜ್ ದೇಸಾಯಿ, ಕೂಲಿಕಾರರಾದ ಎಂ. ನಿಂಗಪ್ಪ, ನಿಂಗಮ್ಮ, ಹಸನ್‌ಸಾಬ್, ಬೆಟ್ಟಪ್ಪ, ಸಿದ್ದಮ್ಮ, ಬಿಯಮ್ಮ, ಬಸಮ್ಮ ಇತರರಿದ್ದರು.
Published on

ಹಟ್ಟಿಚಿನ್ನದಗಣಿ: ಸಮೀಪದ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ವೀರಾಪೂರು ಗ್ರಾಮದ ಎನ್‌ಆರ್‌ಇಜಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯಿಂದ ಗ್ರಾಪಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಸರಿಯಾಗಿ ಎನ್‌ಎಂಆರ್ ತೆಗೆಯುತ್ತಿಲ್ಲ. ಕಂಪ್ಯೂಟರ್ ಆಪರೇಟರ್ ಸರಿಯಾಗಿ ಪಂಚಾಯಿತಿಗೆ ಬರುತ್ತಿಲ್ಲ. ಜಾಬ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಎರಡು-ಮೂರು ವರ್ಷವಾದರೂ ಜಾಬ್‌ಕಾರ್ಡ್ ನೀಡಿಲ್ಲ. ಮಹತ್ವಾಕಾಂಕ್ಷಿ ನರೇಗಾ ಯೋಜನೆ ಗ್ರಾಮಾಡಳಿತ ನಿರ್ಲಕ್ಷದಿಂದ ಹಳ್ಳ ಹಿಡಿಯುತ್ತಿದೆ ಎಂದು ಸದಸ್ಯ ರಮೇಶ್ ವೀರಾಪೂರ್ ಆಕ್ರೋಶ ವ್ಯಕ್ತಪಡಿಸಿದರು.

ನರೇಗಾ ಕೆಲಸದ ಸ್ಥಳಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ಬಾಕಿ ಇರುವ ಇಂಗು ಗುಂಡಿ, ದನದ ಶೆಡ್ ಇತರ ಕೆಲಸದ ಸಾಮಗ್ರಿ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪಿಡಿಒ ಗುರುಸಿದ್ದಪ್ಪ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕೃಷಿ ಕೂಲಿಕಾರ ಸಂಘಟನೆ ತಾಲೂಕು ಮುಖಂಡ ಲಿಂಗರಾಜ್ ದೇಸಾಯಿ, ಕೂಲಿಕಾರರಾದ ನಿಂಗಪ್ಪ ಎಂ, ನಿಂಗಮ್ಮ, ಹಸನ್ ಸಾಬ್, ಬೆಟ್ಟಪ್ಪ, ಸಿದ್ದಮ್ಮ, ಬಿಯಮ್ಮ, ಬಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net