ಹಟ್ಟಿಯಲ್ಲಿ ಬಿರುಗಾಳಿ-ಮಳೆ ಆರ್ಭಟ- ಧರೆಗುರುಳಿದ ಬೃಹತ್ ಮರಗಳು, ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಕುಟುಂಬ

ಹಟ್ಟಿ ಪಟ್ಟಣದ ಸಿಮೇಂಡ್ಸ್ ಶಾಲೆಯ ಆವರಣದಲ್ಲಿ 70 ವರ್ಷದ ಹಳೆಯದಾದ ನೀಲಗಿರಿ ಮರ ಧರೆಗುರುಳಿದೆ. ಹಟ್ಟಿ ಕ್ಯಾಂಪಿನ ಜತ್ತಿ ಕಾಲನಿಯಲ್ಲಿ ಕಾರ್ಮಿಕನ ಮನೆ ಮೇಲೆ ಮರ ಬಿದ್ದಿರುವುದು, ಸಿಸಿ ರಸ್ತೆ ಹಳ್ಳದಂತಾಗಿರುವುದು, ರಸ್ತೆ ಮೇಲೆ ಉರುಗಳಿದ ಮರಗಳು.
ಹಟ್ಟಿ ಪಟ್ಟಣದ ಸಿಮೇಂಡ್ಸ್ ಶಾಲೆಯ ಆವರಣದಲ್ಲಿ 70 ವರ್ಷದ ಹಳೆಯದಾದ ನೀಲಗಿರಿ ಮರ ಧರೆಗುರುಳಿದೆ. ಹಟ್ಟಿ ಕ್ಯಾಂಪಿನ ಜತ್ತಿ ಕಾಲನಿಯಲ್ಲಿ ಕಾರ್ಮಿಕನ ಮನೆ ಮೇಲೆ ಮರ ಬಿದ್ದಿರುವುದು, ಸಿಸಿ ರಸ್ತೆ ಹಳ್ಳದಂತಾಗಿರುವುದು, ರಸ್ತೆ ಮೇಲೆ ಉರುಗಳಿದ ಮರಗಳು.
Published on

ಹಟ್ಟಿಚಿನ್ನದಗಣಿ: ಪಟ್ಟಣದಲ್ಲಿ ಗುರುವಾರ ಸಂಜೆ ಮಿಂಚು, ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದರಿಂದ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿದರೆ, ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.

ಹಟ್ಟಿ ಸುತ್ತಲಿನ ಗೌಡೂರು, ಕೋಠಾ, ನಗನೂರು, ನಿಲೋಗಲ್ ಸೇರಿದಂತೆ ಇತರ ಗ್ರಾಮಗಳಲ್ಲೂ ಗಾಳಿ, ಮಳೆಯ ಆರ್ಭಟ ಜೋರಾಗಿತ್ತು. ಇನ್ನು ರಸ್ತೆ ಬದಿಯ ಡಬ್ಬಾ ಅಂಗಡಿಗಳು ಗಾಳಿಯ ರಭಸಕ್ಕೆ ಉರುಳಿ, ಹತ್ತಾರು ಬೈಕ್‌ಗಳು ಕೂಡ ಜಖಂಗೊಂಡಿವೆ. ಅಲ್ಲದೆ, ಅಲ್ಲಲ್ಲಿ ಹಲವು ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಜನರಿಗೆ ಆತಂಕ ಎದುರಾಗಿದೆ. ರಸ್ತೆ ಮೇಲೆ ಬಿದ್ದ ಮರಗಳನ್ನು ಜನರೇ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮನೆ ಮೇಲೆ ಬಿದ್ದ ಮರ: ಹಟ್ಟಿ ಕ್ಯಾಂಪಿನ ಜತ್ತಿ ಕಾಲನಿಯಲ್ಲಿ ಕಾರ್ಮಿಕರ ಮನೆ ಮೇಲೆ ಬೃಹತ್ ಆಲದ ಮರ ಉರುಳಿ ಬಿದ್ದಿದ್ದು, ಛಾವಣಿ ಸಂಪೂರ್ಣ ಕುಸಿದು, ಮನೆ ಜಲಾವೃತಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲೇ ಇದ್ದ ಕಾರ್ಮಿಕನ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದರಿಂದ ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿತ್ತು.

ಹಳ್ಳದಂತಾದ ರಸ್ತೆಗಳು: ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಪೈ ಭವನದ ಓಣಿಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. 11ನೇ ವಾರ್ಡ್‌ನಲ್ಲಿ ಚರಂಡಿಗಳಿಲ್ಲದ ಕಾರಣ ಮಳೆನೀರು ರಸ್ತೆ ಮೆಲೆ ಹರಿದು ಮನೆಗಳಿಗೆ ನುಗ್ಗಿದೆ. ಇದೇ ವಾರ್ಡ್‌ನಲ್ಲಿ ಹತ್ತಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ಸಿಮೇಂಡ್ಸ್ ಶಾಲೆಯ ಆವರಣದಲ್ಲಿ 70 ವರ್ಷದ ಮರವೊಂದು ಧರೆಗುರುಳಿದೆ. ಮಳೆಗೆ ರಸ್ತೆಯು ಹಳ್ಳದಂತಾಗಿ ಜನರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net