

ಹಟ್ಟಿಚಿನ್ನದಗಣಿ: ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸಲಾಗುವುದು ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಸಮೀಪದ ಕೋಠಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ಕೋಠಾ ಗ್ರಾಪಂ ವ್ಯಾಪ್ತಿಯ ಕೋಠಾ ಹಾಗೂ ಮೇದಿನಾಪುರ ಗ್ರಾಮಗಳಲ್ಲಿ ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿದ 1,150 ಫಲಾನುಭವಿಗಳಿಗೆ ಸೂರು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಹರಿಂದ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಹಣದ ಬೇಡಿಕೆ ಇಡುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಪಂ ಇಒ ಲಕ್ಷ್ಮೀದೇವಿ ಮಾತನಾಡಿ, ಫಲಾನುಭವಿಗಳು ಸಮರ್ಪಕ ದಾಖಲೆ ಸಲ್ಲಿಸಿ ವಸತಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಗ್ರಾಪಂ ಅಧ್ಯಕ್ಷ ಅಮರೇಗೌಡ ಮಾಲೀಪಾಟೀಲ್, ಸಿಡಿಪಿಒ ಶರಣಮ್ಮ ಕಾರನೂರು, ಗುರುಗುಂಟಾ ಸಹಾಯಕ ಕೃಷಿ ಅಧಿಕಾರಿ ಶಿವರಾಜ್, ಪಿಡಿಒ ಗಜದಂಡಸ್ವಾಮಿ, ತೋಟಗಾರಿಕೆ ಅಧಿಕಾರಿ ತಾವರೆಪ್ಪ, ಕರ ವಸೂಲಿಗಾರ ಚನ್ನಬಸನಗೌಡ, ಪ್ರಮುಖರಾದ ಪಾಮಯ್ಯ ಮುರಾರಿ, ಶಿವಣ್ಣ ನಾಯಕ್, ನಾಗರೆಡ್ಡಿ ಜೇರಬಂಡಿ, ಎಂ.ಲಿಂಗರಾಜು, ಶೀಲವಂತ ಹಣಗಿ ಇದ್ದರು.