

ಹಟ್ಟಿಚಿನ್ನದಗಣಿ: ಪಟ್ಟಣ ಸೇರಿ ಸುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುರಿದ ನಿರಂತರ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ತೊಗರಿ ಬೆಳೆ ಹಾನಿಗೀಡಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.
ಸಾಲ ಮಾಡಿ ಬೀಜ ಬಿತ್ತಿ, ಗೊಬ್ಬರ ಹಾಕಿ ಪೋಷಿಸಿದ್ದ ಒಂದೂವರೆ-ಎರಡು ತಿಂಗಳಿನ ತೊಗರಿ ಬೆಳೆ ನಿರಂತರ ಮಳೆಗೆ ಕೊಳೆಯುತ್ತಿದೆ. ಹೂ ಕಟ್ಟುವ ಸಂದರ್ಭದಲ್ಲೇ ಬಾಡುತ್ತಿರುವ ಬೆಳೆ ಕಂಡು ರೈತರು ಆತಂಕಗೊಂಡಿದ್ದಾರೆ. ಮಳೆಯಿಂದ ಅನುಕೂಲವಾಗಲಿದೆ ಎನ್ನುವ ಬೆಳೆಗಾರರ ಲೆಕ್ಕಾಚಾರ ಉಲ್ಟಾ ಆಗಿದ್ದು, ವ್ಯಯಿಸಿದ ಖರ್ಚನ್ನು ಸರಿದೂಗಿಸಲು ಪರದಾಡುವ ಸ್ಥಿತಿ ಎದುರಾಗಿದೆ.
ಮುಂಗಾರು ಹಂಗಾಮಿಗೆ ಗುರುಗುಂಟಾ ಹೋಬಳಿಯಲ್ಲಿ ಗುರಿ ಮೀರಿ (6950 ಹೆ.) 7 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಪೈಕಿ ಹಟ್ಟಿ ಪಟ್ಟಣ ಮತ್ತು ಯರಡೋಣಾ ಸುತ್ತ್ತಲಿನ ಹಳ್ಳಿಗಳಲ್ಲಿ ಅಂದಾಜು 450 ಎಕರೆಯಷ್ಟು ತೊಗರಿ ಹಾನಿಗೊಳಗಾಗಿದೆ.
ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ತ್ವರಿತವಾಗಿ ಪರಿಹಾರ ನೀಡಲು ಕ್ರಮವಹಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ನೈಸರ್ಗಿಕ ಆಪತ್ತು ಪರಿಹಾರ ನಿಧಿಯಡಿ ತಕ್ಷಣ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
====
ಮಳೆ ನೀರು ನಿಂತು ತೊಗರಿ ಬೆಳೆ ಕೊಳೆಯುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡಿಲ್ಲ. ಅವರು ದೂರು ಸಲ್ಲಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ.
> ಹನುಮಂತ ರಾಠೋಡ್, ಕೃಷಿ ಅಧಿಕಾರಿ, ಗುರುಗುಂಟಾ ಹೊಬಳಿ
ಕೋಟ್ 2
ಸಾಲ ಮಾಡಿ ಕಷ್ಟಪಟ್ಟು ಬೆಳೆದ ತೊಗರಿ ಬೆಳೆ ಮಳೆ ನೀರಿಗೆ ಕೊಳೆಯುತ್ತಿದೆ. ಉತ್ತಮ ಇಳುವರಿ ನಿರೀಕ್ಷೆ ಹುಟ್ಟಿಸಿದ್ದ ಬೆಳೆ ಬಾಡಿ ನಷ್ಟಕ್ಕೀಡು ಮಾಡಿದೆ. ಸರ್ಕಾರ ಆದಷ್ಟು ಬೇಗ ಸರ್ವೇ ಮಾಡಿ ರೈತರಿಗೆ ಪರಿಹಾರ ಘೋಷಿಸಬೇಕು.
> ಹುಸೇನಪ್ಪ ದೊಡ್ಡಮನಿ, ರೈತ, ಯರಡೋಣಾ