

ಹಟ್ಟಿಚಿನ್ನದಗಣಿ: ಚಿನ್ನದಗಣಿನಾಡಲ್ಲಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಚುನಾವಣೆ ಪ್ರಚಾರ ಬಿರುಸು ಪಡೆದಿದ್ದು, ತಕ್ಕಡಿ ಚಿಹ್ನೆಯ ಎಐಟಿಯುಸಿ ಹಾಗೂ ಆಕಳು ಪಕ್ಷದ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಚಿನ್ನದ ಗಣಿ ಕಾರ್ಮಿಕ ಸಂಘದಲ್ಲಿರುವ 25 ಪದಾಧಿಕಾರಿಗಳ ಸ್ಥಾನಗಳಿಗೆ ತೀವ್ರ ಪೈಪೋಟಿ ಇದ್ದು, ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂ. 21ರಂದು ಮತದಾನ ಮತ್ತು 22 ರಂದು ಫಲಿತಾಂಶ ಹೊರ ಬೀಳಲಿದೆ.
ಚಿನ್ನದ ಗಣಿ ಮತ್ತು ಕಾರ್ಮಿಕರ ಸಮಸ್ಯೆಗಳ ಆಳ-ಅಗಲ ಬಲ್ಲ ಘಟಾನುಘಟಿಗಳು ಕಣದಲ್ಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಐಟಿಯುಸಿಯ ಚಂದ್ರಶೇಖರ, ಆಕಳು ಪಕ್ಷದ ರಾಘವೇಂದ್ರ ಕುಷ್ಟಗಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಐಟಿಯುಸಿಯ ವಿಜಯಭಾಸ್ಕರ್, ಆಕಳು ಪಕ್ಷದ ವಾಲೇಬಾಬು ನಡುವೆ ನೇರ ಹಣಾಹಣಿ ಇದೆ.
ಬಂಡಿಗಾಲಿ ಚಿಹ್ನೆಯ ಸಿಐಟಿಯು, ಸೈಕಲ್ ಚಿಹ್ನೆಯ ಟಿಯುಸಿಐ ಪಕ್ಷದವರೂ ಚುನಾವಣೆಗೆ ಸ್ಪರ್ಧಿಸಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ವೈಫಲ್ಯಗಳನ್ನು ಕಾರ್ಮಿಕರ ಮುಂದಿಟ್ಟು ಮತಯಾಚನೆ ಮಾಡಿದರೆ, ವಜ್ರ ಚಿಹ್ನೆಯ ಬಿಎಂಎಸ್ ಪಕ್ಷದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.
ಪಾರ್ಟಿ ಜೋರು: ಕಾರ್ಮಿಕ ಸಂಘದ ಚುನಾವಣೆಯಲ್ಲಿ ಗೆಲ್ಲಲ್ಲು ತಕ್ಕಡಿ, ಆಕಳು ಪಕ್ಷಗಳು ತೀವ್ರ ಕಸರತ್ತು ನಡೆಸಿವೆ. ಇತರ ಪಕ್ಷದ ಕೆಲ ಅಭ್ಯರ್ಥಿಗಳ ಉಟೋಪಚಾರ, ಪಾರ್ಟಿ ಆಯೋಜನೆ ಜೋರಾಗಿದೆ. ಇತ್ತೀಚೆಗೆ ಹೊಸ ಟ್ರೆಂಡ್ ಎಂಬಂತೆ ಮರದಡಿಯಲ್ಲಿಯೇ ಪಾರ್ಟಿ ಮಾಡಲಾಗುತ್ತಿದೆ.
ಪದಪ್ರಯೋಗ ಮುಜುಗರ: ಮತಯಾಚನೆ ಮಾಡಲು, ಪಕ್ಷದ ಪ್ರಣಾಳಿಕೆ ತಿಳಿಸಲು ಬಹಿರಂಗ ಸಭೆಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಘಟಾನುಘಟಿ ಕಾರ್ಮಿಕ ಮುಖಂಡರು ಭಾಷಣದಲ್ಲಿ ಬಳಸಿದ ಶಬ್ದಗಳು ಕಾರ್ಮಿಕ ವರ್ಗದಲ್ಲಿ ಮುಜುಗರ ತರಿಸಿವೆ.
ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾರ್ಮಿಕ ಸಂಘಟನೆಗಳು ಕ್ರಾಂತಿ ಗೀತೆಗಳನ್ನು ಹಾಡಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿವೆ. ತಕ್ಕಡಿ, ಆಕಳು ಪಕ್ಷಗಳು ಗೆಲುವಿಗೆ ತೀವ್ರ ಜಿದ್ದಾಜಿದ್ದಿಗೆ ಇಳಿದಿವೆ. ಆದರೆ, ಕಾರ್ಮಿಕ ಮತದಾರ ಯಾರ ಮೇಲೆ ಒಲವು ತೋರಿದ್ದಾನೆ ಎಂಬುದು ಜೂ. 22ಕ್ಕೆ ಬಹಿರಂಗಗೊಳ್ಳಲಿದೆ.
ಆಡಿಯೋ ವೈರಲ್: ಸಿಐಟಿಯು (ಬಂಡಿಗಾಲಿ) ಪಕ್ಷದ ಸದಸ್ಯರ ಭ್ರಷ್ಟಾಚಾರದ ಆಡಿಯೋ ವೈರಲ್ ಆಗಿದೆ. ಪರಿಣಾಮ ಕಾರ್ಮಿಕ ವಲಯದಲ್ಲಿ ಇರಿಸು-ಮುರಿಸು ಉಂಟು ಮಾಡಿದ್ದು, ಕಾರ್ಮಿಕರು ಎಐಟಿಯುಸಿ (ತಕ್ಕಡಿ) ಮತ್ತು ಆಕಳು ಪಕ್ಷದತ್ತ ವಾಲಿದ್ದಾರೆ. ಹೀಗಾಗಿ ತಕ್ಕಡಿ ಹಾಗೂ ಆಕಳು ಪಕ್ಷದ ಮಧ್ಯೆ ನೇರ ಫೈಟ್ ಏರ್ಪಡುವುದು ಗೋಚರವಾಗಿದೆ.
ಕಾರ್ಮಿಕರಿಗೆ ಪ್ರಮುಖ ಸವಲತ್ತುಗಳನ್ನು ಒದಗಿಸಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ವೇತನ ಒಪ್ಪಂದವಿದ್ದು, ಹಿಂದಿನ ವೇತನ ಒಪ್ಪಂದಗಳು ಉತ್ತಮವಾಗಿ ಮಾಡಿದ್ದರಿಂದ ಕಾರ್ಮಿಕರು ಮತ್ತೊಮ್ಮೆ ನಮ್ಮ ಕೈಹಿಡಿಯುವ ವಿಶ್ವಾಸವಿದೆ.
> ವಿಜಯ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ, ಎಐಟಿಯುಸಿ
ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಕಾರ್ಮಿಕರ ಅಭೂತಪೂರ್ವ ಸ್ಪಂದನೆ ಹಾಗೂ ಪ್ರಚಾರಕ್ಕೆ ತೆರಳಿದಾಗ ತೋರಿಸುವ ಕಾಳಜಿ ಮನಗಂಡಾಗ ಆಕಳು ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸವಿದೆ.
> ವಾಲೇಬಾಬು, ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ, ಆಕಳು ಪಕ್ಷ