

ಹಟ್ಟಿಚಿನ್ನದಗಣಿ: ಕಾರ್ಮಿಕರ ವೈದ್ಯಕೀಯ ಅನರ್ಹತೆ ಯೋಜನೆ (ಮೆಡಿಕಲ್ ಅನ್‌ಫಿಟ್) ಕುರಿತು ಸರ್ಕಾರದೊಂದಿಗೆ ಚರ್ಚಿಸಿದ್ದು, ವೈದ್ಯಕೀಯ ತಪಾಸಣೆಗಾಗಿ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಸರ್ಕಾರ ಮುತುವರ್ಜಿ ತೋರಿಸಿದರೆ ಕಾರ್ಮಿಕರಿಗೆ ಅವಕಾಶ ದೊರೆಯಬಹುದು ಎಂದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿದರು.
ವೇತನ ಹೆಚ್ಚಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಕಾರ್ಮಿಕರ ಸಭೆಯಲ್ಲಿ ಗುರುವಾರ ಮಾತನಾಡಿದರು. ಜಿ-12 ದರ್ಜೆ ನೌಕರರು ಪ್ರಸ್ತುತ 29 ಸಾವಿರ ರೂ. ವೇತನ ಪಡೆಯುತ್ತಿದ್ದು ಹೊಸ ವೇತನ ಯೋಜನೆ ಜಾರಿಯಾದ ಬಳಿಕ 43 ಸಾವಿರ ರೂ. ಪಡೆಯಲಿದ್ದಾರೆ. ವೇತನ ಹೆಚ್ಚಳಕ್ಕೆ ಗಣಿ ಆಡಳಿತ ವರ್ಗ 4.32 ಕೋಟಿ ರೂ. ಒದಗಿಸಿದ್ದು, ಮೂಲ ವೇತನಕ್ಕೆ ತುಟ್ಟಿ ಭತ್ಯೆ ಸೇರಿಸಿದರೆ ಕಾರ್ಮಿಕರ ವೇತನ ಶೇ.24 ಹೆಚ್ಚಳವಾಗಲಿದೆ ಎಂದು ಹೇಳಿದರು.
ವೇತನ ಹೆಚ್ಚಳಕ್ಕೆ ಸಂಬಂಧಿಸಿ ದಂತೆ ಶೇ.10 ಮಧ್ಯಂತರ ಪರಿಹಾರ ಕೊಡಿಸಲಾಗಿದೆ. ಡಿ.23 ರಂದು ವೇತನ ಹೆಚ್ಚಳ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ. ಕಾರ್ಮಿಕರು ಕೆಲಸಕ್ಕೆ ಗೈರಾಗಬಾರದು. ಕಾರ್ಮಿಕರ ಗೈರನ್ನೇ ಆಡಳಿತ ವರ್ಗ ನಮ್ಮತ್ತ ಬೆರಳು ಮಾಡಿ ತೋರಿಸುತ್ತಿದೆ. ಕಾರ್ಮಿಕರನ್ನು ಎಷ್ಟು ಸಾಧ್ಯವೋ ಅಷ್ಟು ರಕ್ಷಣೆ ಮಾಡಲಾಗುವುದು. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ವಿಜಯಭಾಸ್ಕರ್ ಎಚ್ಚರಿಸಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ.ಶಫಿ ಮಾತನಾಡಿ, ಭೂಕೆಳಮೈ ಭತ್ಯೆಯನ್ನು 2500 ರೂ.ಯಿಂದ 4450 ರೂ.ಗೆ ಹೆಚ್ಚಿಸಲಾಗಿದೆ. ಮನೆ ಬಾಡಿಗೆ ಭತ್ಯೆಯನ್ನು ವೇತನ ಆಧರಿಸಿ ಶೇ.8 ಹೆಚ್ಚಿಸಲಾಗಿದೆ. ಹೀಗೆ ಹಲವು ಭತ್ಯೆಗಳನ್ನು ಹೆಚ್ಚಿಸಲಾಗಿದೆ ಎಂದರು. ವೇತನ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಕಾರ್ಮಿಕ ಸಮ್ಮತಿ ಪಡೆಯಲಾಯಿತು.