ಶಾಲಾ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿದೆ ದೈಹಿಕ ಶ್ರಮ

Hutti yoga
ಹಟ್ಟಿಚಿನ್ನದಗಣಿ ಸಮೀಪದ ಆನ್ವರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಯೋಗ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು.
Published on

ಹಟ್ಟಿಚಿನ್ನದಗಣಿ: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಪಂಚದಾದ್ಯಂತ ಜನರು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗಾಭ್ಯಾಸದಿಂದ ಮಾನವನ ಸ್ವಾಸ್ಥ್ಯ ಕಾಪಾಡಲು ಸಹಕಾರಿ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಂಕರಪ್ಪ ಸಕ್ರಿ ಹೇಳಿದರು.

ಆನ್ವರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜಯವಾಣಿ ಕನ್ನಡ ದಿನ ಪತ್ರಿಕೆ ಹಾಗೂ ಲಿಂಗಸುಗೂರಿನ ಶ್ರೀ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿದ್ದು, ಯೋಗಾಭ್ಯಾಸ, ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಜೀವನದಿಂದಲೇ ತರಬೇತಿ ಅವಶ್ಯವಾಗಿದೆ. ಆರೋಗ್ಯ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳ ಕುರಿತು ಆಸ್ಥೆ ವಹಿಸಿ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಶಂಕರಪ್ಪ ಸಕ್ರಿ ಸಲಹೆ ನೀಡಿದರು.

ಎಸ್ಡಿಎಂಸಿ ಅಧ್ಯಕ್ಷ ಸಂಗನಗೌಡ, ಶಿಕ್ಷಕರಾದ ಅಮರಣ್ಣ ಅಂಜುಳ, ಆರೋಗ್ಯಪ್ಪ, ಹುಸೇನ್ ಬಾಷಾ, ಭಾಗ್ಯಶ್ರೀ, ಶ್ರೀನಿವಾಸ್, ಫಯಾಜ್, ಸಂಗೀತಾ, ಶಂಕರ್, ಪತ್ರಕರ್ತ ವಿನೋದ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net