

ಹಟ್ಟಿ ಚಿನ್ನದಗಣಿ: ಹಟ್ಟಿ-ರಾಯಚೂರು ಮುಖ್ಯರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಮೊಕ್ಕಾಂ ಹೂಡಿರುವುದರಿಂದ ಪ್ರಯಾಣಿಕರಿಗೆ, ಬೈಕ್ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತಲೆನೋವಾಗಿದೆ.
ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯ ಕ್ಯಾಂಪ್ ಬಸ್ ನಿಲ್ದಾಣ, ಅಂಚೆ ಕಚೇರಿ, ಹೊಸ ಬಸ್ ನಿಲ್ದಾಣದ ಮುಂಭಾಗ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಳೆಯ ಬಸ್ ನಿಲ್ದಾಣ, ಕಾಕಾ ನಗರ, ಪಾಮನಕಲ್ಲೂರ ಕ್ರಾಸ್, ಕೋಠಾ ಕ್ರಾಸ್ ಸೇರಿದಂತೆ ಪ್ರಮುಖ ವೃತ್ತ ಹಾಗೂ ಮುಖ್ಯರಸ್ತೆ ಮಧ್ಯೆ ಹಾಗೂ ರಸ್ತೆ ವಿಭಜಕದ ಇಕ್ಕೆಲಗಳಲ್ಲಿ ಜಾನುವಾರು ಗಳು ಠಿಕಾಣಿ ಹೂಡುತ್ತಿರುವುದರಿಂದ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ತಿರುಗಾಡುವಂತಾಗಿದೆ.
ಪಟ್ಟಣದ ಮುಖ್ಯರಸ್ತೆಯ ಉದ್ದಕ್ಕೂ ರಸ್ತೆ ವಿಭಜಕಗಳನ್ನು ಅಳವಡಿಸಲಾಗಿದೆ. ಆದರೆ, ಅವೈಜ್ಞಾನಿಕ ನಿರ್ಮಾಣದಿಂದ ಪಾರ್ಕಿಂಗ್ ವ್ಯವಸ್ಥೆ ಸಮಸ್ಯೆಯಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಅರ್ಧ ರಸ್ತೆಯನ್ನು ದನಗಳು, ನಿಲ್ಲಿಸಿದ ವಾಹನಗಳೇ ಆವರಿಸಿದಾಗ ತಿರುಗಾಡುವ ವಾಹನ-ಜನರಿಗೆ ರಸ್ತೆಯೇ ಇಲ್ಲದಂತಾಗಿದೆ. ಇದರಿಂದ ಹಲವು ಬಾರಿ ಅಪಘಾತಗಳು ಸಂಭವಿಸಿವೆ.
ಕಳೆದ ವರ್ಷ ಪಟ್ಟಣದ ಮುಖಂಡರೇ ಬಿಡಾಡಿದನಗಳ ಮಾಲೀಕರನ್ನು ಗುರುತಿಸಿ ಕೆಲವನ್ನು ಅವರಿಗೆ ನೀಡಿದ್ದು, ಉಳಿದವಗಳನ್ನು ಕೊಂಡವಾಡಿಗಳಿಗೆ ಸಾಗಿಸಿದ್ದರು. ಪ್ರಸ್ತುತ ದಿನಗಳಲ್ಲಿ ಅಸಂಖ್ಯ ದನಗಳು ಜಮಾವಣೆ ಆಗಿರುವುದು ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ.
ದನಗಳನ್ನು ರಸ್ತೆಗೆ ಬಿಡದಂತೆ ಮಾಲೀಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು. | ಜಗನ್ನಾಥ ಜೋಶಿ ಮುಖ್ಯಾಧಿಕಾರಿ, ಹಟ್ಟಿ ಪಪಂ ರಸ್ತೆ ಮೇಲೆ ದನಗಳು ಠಿಕಾಣಿ ಹೂಡಿದ್ದರಿಂದ ಮಕ್ಕಳು, ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗಿದೆ. ಜನರ ಜೀವ ಹೋಗುವ ಮೊದಲು ಪಪಂನವರು ಕ್ರಮ ಕೈಗೊಳ್ಳಬೇಕು. | ಕಿರಣ ಕುಮಾರ ಸ್ಥಳಿಯ ನಿವಾಸಿ