ಅಗತ್ಯ ಸೌಲಭ್ಯಗಳಿದ್ದರೂ ದಾಖಲಾತಿ ಕುಸಿತ

Hutti Govt PU Colleage
ಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೊರನೋಟ.
Published on

ಸುನೀಲ್ ಕುಮಾರ್

ಹಟ್ಟಿಚಿನ್ನದಗಣಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿತ ಬಿಸಿ ಇದೀಗ ಸರ್ಕಾರಿ ಕಾಲೇಜಗಳಿಗೂ ತಟ್ಟಿದೆ. ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಖಾಸಗಿ ಕಾಲೇಜುಗಳ ಅಬ್ಬರದಿಂದ ಪ್ರವೇಶಾತಿ ಕುಂಠಿತಗೊಳ್ಳುತ್ತಿದೆ.

ಐದಾರು ವರ್ಷಗಳ ಹಿಂದೆ ಐವತ್ತು ವರ್ಷ ಪೂರೈಸಿದ ಸರ್ಕಾರಿ ಪಿಯು ಕಾಲೇಜಿಗೆ 400 ರಿಂದ 500 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕೇವಲ 65 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ, ಖಾಸಗಿ ಕಾಲೇಜುಗಳ ಹೆಚ್ಚಳದಿಂದ ನಿರೀಕ್ಷಿತ ದಾಖಲಾತಿ ಆಗಿಲ್ಲ ಎನ್ನುತ್ತಾರೆ ಉಪನ್ಯಾಸಕರು.

ಅಲ್ಲದೆ, ಪಾಲಕರು ಮಕ್ಕಳ ಭವಿಷ್ಯ ದೃಷ್ಟಿಯಿಂದ ಪಿಯುಸಿ ಹಂತದಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ನಡೆಸುವ ನೀಟ್, ಸಿಇಟಿ, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಒತ್ತು ಕೊಡುವುದರಿಂದ ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಕೊರ್ಸ್‌ಗಳಿಗೆ ಉಪನ್ಯಾಸಕರಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಅರ್ಹ ಉಪನ್ಯಾಸಕರಿಲ್ಲದಿದ್ದರೂ ವಿದ್ಯಾರ್ಥಿಗಳು, ಪಾಲಕರಲ್ಲಿನ ವಿಶೇಷ ಆಸಕ್ತಿಯಿಂದ ಅವುಗಳತ್ತ ಮುಖ ಮಾಡುತ್ತಿರು ವುದರಿಂದ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ ಇಳಿಮುಖವಾಗಿದೆ.

ಹೊಸ ಕೋರ್ಸ್ ಆರಂಭ

ಪ್ರಸಕ್ತ ವರ್ಷದಿಂದಲೇ ಪಿಯುಸಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬ್ಯೂಟಿಷಿಯನ್ ಎಂಬ ಎರಡು ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳಿಗಿಂತಲೂ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹೊಸ ಕೊರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂಬುದು ಉಪನ್ಯಾಸಕರ ಮಾತಾಗಿದೆ.

ಹಾಸನದಿಂದ ಹಟ್ಟಿಗೆ ವರ್ಗಾವಣೆಯಾಗಿ ಬಂದಿರುವೆ. ಪಟ್ಟಣದ ಸುತ್ತ್ತಲಿನ ವಿದ್ಯಾರ್ಥಿಗಳು ಹೊಸ ಕೊರ್ಸ್‌ಗಳಿಗೆ ಪ್ರವೇಶ ಪಡೆದು ಮಾಹಿತಿ ತಂತ್ರಜ್ಞಾನ ಮತ್ತು ವೈದ್ಯಕೀಯದಂತಹ ಕ್ಷೇತ್ರದಲ್ಲಿ ಕ್ರಿಯಾಶಿಲರಾಗಿ ಕಾರ್ಯನಿರ್ವಹಿಸಬೇಕು ಎಂಬುವುದೇ ನಮ್ಮೆಲ್ಲರ ಆಶಯ. ಅದಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾಗಬೇಕು. | ಶಾಮ್‌ರಾವ್ ಜಿ. ಪ್ರಾಚಾರ್ಯ, ಸರ್ಕಾರಿ ಪಪೂ ಕಾಲೇಜು, ಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net