ಗೌಡೂರು ವೀರಭದ್ರೇಶ್ವರ ರಥೋತ್ಸವ ಅದ್ದೂರಿ

Untitled design(18)
Published on

ಹಟ್ಟಿ ಚಿನ್ನದಗಣಿ: ಸಮೀಪದ ಗೌಡೂರು ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮದಿಂದ ಜರುಗಿತು.

ಕಾರ್ತಿಕ ಮಾಸದ ಹೊಸ್ತಿಲ ಹುಣ್ಣುಮೆ ನವಮಿಯಂದು ಜಾತ್ರೆ ನಡೆಯುತ್ತದೆ. ವರ್ಷ ಪದ್ಧತಿಯಂತೆ ಜಾತ್ರಾಮಹೋತ್ಸವದ ನಿಮಿತ್ತ ಗ್ರಾಮದಲ್ಲಿ ಕಳೆದ 4 ದಿನಗಳಿಂದ ಕಾರ್ತಿಕೋತ್ಸವ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ಜರುಗಿದವು. 5ನೇ ಮಂಗಳವಾರ ದಿನದಂದು ತೇರನ್ನು ಹೂವಿನಿಂದ ಅಲಂಕೃತಗೊಳಿಸಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ತೇರಿನ ಒಳಗಡೆ ಗುರುಗುಂಟಾ ಅಮರೇಶ್ವರ ಗುರು ಅಭಿನವ ಗಜದಂಡ ಶ್ರೀಗಳು ಕುಳಿತಿಕೊಂಡರು. ನಂತರ ರಥಾರೂಢರಾದ ಬಳಿಕ ಉತ್ಸವ ಮೂರ್ತಿ, ರಾಚೋಟಿ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ಗ್ರಾಮದ ದೈವದ ಪರವಾಗಿ ರಾಜಾ ವೆಂಕಟಪ್ಪ ನಾಯಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರು ಸಾಗುವ ರಥಬೀದಿಯಲ್ಲಿ ಭಕ್ತರು ಬಗೆಬಗೆಯ ಬಾಣ ಬಿರುಸುಗಳನ್ನು ಹಾರಿಸಿ ಹೊಸ ಮೆರಗು ನೀಡಿದರು.

ತೇರಿನ ಮುಂದೆ ದಿವಟಿಗಿಯ ಬೆಳಕು ಚೆಲ್ಲಿದ್ದರೆ ಬಾಜಾ-ಭಜಂತ್ರಿ, ತಮಟೆ ನಿನಾದ ರಥಬೀದಿಯಲ್ಲಿ ಹೊಸ ಸಂಗೀತ ಲೋಕವೇ ಅನಾವರಗೊಂಡಿತು. ಹೂವು, ಬಾಳೆದಿಂಡು, ತೆಂಗಿನಗರಿ, ವಿದ್ಯುತ್ ದೀಪಗಳ ಅಲಂಕೃತಗೊಂಡ ತೇರು ಸಾಗುವಾಗ ಭಕ್ತರು ಉತ್ತತ್ತಿ, ಕಲ್ಲು ಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು. ರಾತ್ರಿ ಮಾತು ಬಿದ್ದಿತು ಮೌನ ಗೆದ್ದಿತು ಎಂಬ ಸಾಮಾಜಿಕ ನಾಟಕದ ಪ್ರದರ್ಶನ ನಡೆಯಿತು.

ಪ್ರಮುಖರಾದ ರಾಜಾ ಸೇತುರಾಮ ನಾಯಕ, ಈರನಗೌಡ ಪೊಲೀಸ್ ಪಾಟೀಲ್, ರಾಜಾ ಗುರುರಾಜ ನಾಯಕ, ರಾಜಾ ಲಕ್ಷ್ಮಣ ನಾಯಕ, ರುದ್ರಣ್ಣ ಸಾಹುಕಾರ, ಮುನಿಯಪ್ಪ ಉದ್ಬಾಳ, ವೆಂಕಟೇಶ ಬೆಣ್ಣಿ, ರಾಚಯ್ಯಸ್ವಾಮಿ ಗಣಚಾರಿ, ಅಮರಪ್ಪ ಉದ್ದಾರ, ಅರ್ಚಕರಾದ ಕರಿವೀರಯ್ಯ ಸ್ವಾಮಿ, ನಾಗಲಿಂಗಯ್ಯ ಸ್ವಾಮಿ, ಚಂದ್ರಶೇಖರ ಕುಲ್ಲೂರು, ಶಿವಪ್ಪ ಬಡಿಗೇರ, ರಮೇಶ ಅಗಸಿಮನಿ, ಅಮರೇಶ ಬಡಿಗೇರ, ಸಿದ್ದಪ್ಪ ಮಡಿಕೇರ, ಯಲ್ಲಪ್ಪ ಮಾನ್ವಿ, ಅಮರಗುಂಡಪ್ಪ ಸಂಗಟಿ, ದುರುಗಪ್ಪ ಕಟಾಲಿ, ಸಿದ್ದೇಶ ಮಾಸರೆಡ್ಡಿ, ಮಲ್ಲಣ್ಣ ಕೊಳೂರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net