ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದ ಶಾಸಕ ಡಿ.ಎಸ್. ಹೂಲಗೇರಿ

21062021 Hutti MLA DS Huligeri work to bhumipuje
Published on

ಹಟ್ಟಿಚಿನ್ನದಗಣಿ: ನನಗೆ ಮತ ಹಾಕಿರಲಿ, ಬಿಡಲಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧನಾಗಿ ಕೆಲಸ ಮಾಡುವೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.

ಪಟ್ಟಣದಲ್ಲಿ ಕೆಕೆಆರ್‌ಡಿಬಿ ಹಾಗೂ ನಗರಾಭಿವೃದ್ಧಿ ಇಲಾಖೆಯ 5 ಕೋಟಿ ರೂ. ವೆಚ್ಚದ ರಸ್ತೆಗಳ ಡಾಂಬರೀಕರಣ, ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಹಳೆ ಬಸ್ ನಿಲ್ದಾಣದಲ್ಲಿ ಭೂಮಿ ಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು.

ಹಿಂದಿನ ಶಾಸಕರು ತಮಗೆ ಮತ ನೀಡಿಲ್ಲವೆಂದು ಹಟ್ಟಿಯ ಅಭಿವೃದ್ಧಿ ಕಡೆಗಣಿಸಿದ್ದರಿಂದ ರಸ್ತೆ, ಚರಂಡಿ, ಕುಡಿವ ನೀರಿನ ಸಮಸ್ಯೆ ಜ್ವಲಂತವಾಗಿವೆೆ. ನೀರಿನ ತೊಂದರೆ ನಿವಾರಣೆಗಾಗಿ ಕೃಷ್ಣಾ ನದಿ ದಡದಲ್ಲಿ ಡಿಎಂಎಫ್ ನಿಧಿಯಡಿ 4 ಕೋಟಿ ರೂ. ವೆಚ್ಚದಲ್ಲಿ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ನಡೆದಿದೆ. ಅದು ಮುಗಿದ ಕೂಡಲೇ ಗುರುಗುಂಟಾ ಗ್ರಾಮ ಹಾಗೂ ಹಟ್ಟಿಗೆ ಪ್ರತ್ಯೇಕ ಪೈಪ್‌ಲೈನ್ ಆಗುತ್ತದೆ. ಆಗ ಬಹುತೇಕ ನೀರಿನ ಸಮಸ್ಯೆ ನೀಗಲಿದೆ. ಉಳಿದಂತೆ ಪಟ್ಟಣದ ಪ್ರಮುಖ ರಸ್ತೆಗಳು ಡಾಂಬರೀಕರಣವಾಗಲಿವೆ. ಚರಂಡಿಗಳ ನಿರ್ಮಾಣ ಸಹ ನಡೆಯಲಿದೆ ಎಂದು ಹೇಳಿದರು.

ತಾಪಂ ಸದಸ್ಯ ಎಂ. ಲಿಂಗರಾಜ, ಕಮ್ಯುನಿಸ್ಟ್ ಮುಖಂಡ ನರಸಿಂಗಭಾನ್ ಠಾಕೂರ್, ಕಾಂಗ್ರೆಸ್ ಮುಖಂಡರಾದ ಸೂಗಪ್ಪ ಗಲಗ್ ಮಾತನಾಡಿದರು. ಪಪಂ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷೆ ನಾಗರತ್ನಾ ಶರಣಗೌಡ ಗುರಿಕಾರ, ಸದಸ್ಯರಾದ ಸೀರಾಜುದ್ದೀನ್, ಬಾಬು ನಾಯಿಕೊಡಿ, ರಂಗನಾಥ ಮುಂಡರಗಿ, ಹನುಮಂತರೆಡ್ಡಿ, ನಾಗರೆಡ್ಡಿ ಜೇರಬಂಡಿ, ಮೌಲಾಸಾಬ್, ಬಸವರಾಜ ಪೈ, ಶಾಂತಪ್ಪ ಅನ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net