ಕುಂಕುಮದ ಬದಲು ಸಿದ್ದರಾಮಯ್ಯಗೆ ಟೋಪಿ ಹಾಕಿ

bellad new
Published on

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಯೇ ಹೋದರೂ ಹಣೆಗೆ ಕುಂಕುಮ ಹಚ್ಚದಂತೆ ರಾಜ್ಯದ ಜನರಲ್ಲಿ ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದು ವಿರೋಧಿ. ಓಲೈಕೆ ರಾಜಕಾರಣ ಮಾಡುವ ಉದ್ದೇಶದಿಂದ ಹಿಂದು ಧರ್ಮದ ಆಚರಣೆಗಳನ್ನು ವಿರೋಧಿಸುತ್ತಾರೆ. ಹೀಗಾಗಿ ಅವರು ಹೋದಲ್ಲೆಲ್ಲ ಕುಂಕುಮ ಹಚ್ಚುವ ಬದಲು ಟೋಪಿ ಹಾಕಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಚಲೋ ಚಳವಳಿ ವಿಚಾರವಾಗಿ ಮಾತನಾಡಿದ ಅವರು, ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ನಾನೂ ಶಾಸಕನಿದ್ದೇನೆ. ಕಳೆದ 8 ತಿಂಗಳಾದರೂ ಒಂದು ಕೋಟಿ ರೂ. ಅನುದಾನ ನೀಡಿಲ್ಲ. ಭ್ರಷ್ಟಾಚಾರದ ಆರೋಪದಿಂದ ಪಾರಾಗಲು ಜನರ ದಾರಿ ತಪ್ಪಿಸುವಂತಹ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅವರು ಏನೇ ತಿಪ್ಪರ್ಲಾಗಾ ಹಾಕಿದರೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನೇ ಆರಿಸಿ ತರುವ ನಿರ್ಧಾರ ಜನರು ಮಾಡಿದ್ದಾರೆ. ಕೇಂದ್ರ ಸರ್ಕಾರದ ದುಡ್ಡು ರಾಜ್ಯ ನಾಯಕರು ಮತ್ತು ಅವರ ಚೇಲಾಗಳು ಜೇಬಿಗೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೇಬಿಗೆ ಹೋಗುವ ದುಡ್ಡನ್ನು ಬರಗಾಲ, ಅಭಿವೃದ್ಧಿಗೆ ಹಾಕಲಿ. ತಾವು ಲೋಕಸಭೆಯಲ್ಲಿ ಗೆಲ್ಲಲ್ಲವೆಂದು ಗೊತ್ತಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ. ಅದಕ್ಕಾಗಿಯೇ ಗ್ಯಾರಂಟಿ ರದ್ದು ಬಗ್ಗೆ ಪೀಠಿಕೆ ಹಾಕುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net