

ಚಿಕ್ಕಬಳ್ಳಾಪುರ: ರೈತನ ಮೇಲಿನ ದ್ವೇಷಕ್ಕೆ ಯಾರೋ ಕಿಡಿಗೇಡಿಗಳು ಜಮೀನಿನಲ್ಲಿನ ಕಲ್ಲಿನ ಕೂಚಗಳನ್ನು ಮುರಿದು ಹಾಕಿದ್ದು ಸಾಲಸೋಲ ಮಾಡಿ ಬಂಡವಾಳ ಹಾಕಿದ್ದ ಮಾಲೀಕ ಕಣ್ಣೀರು ಸುರಿಸುವಂತಾಗಿದೆ.
ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲದ ರೈತ ದೇವರಾಜು ಕಿಡಿಗೇಡಿಗಳ ದುಷ್ಕೃತ್ಯಕ್ಕೆ ನಷ್ಟಕ್ಕೊಳಗಾಗಿರುವುದು. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ನ್ಯಾಯ ದೊರಕಿಸಿಕೊಡಲು ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿನ 29/1-2 ಗುಂಟೆ ಜಮೀನಿನಲ್ಲಿ 9 ಅಡಿ ಉದದ್ದ 600 ಕಲ್ಲುಗಳನ್ನು ನೆಟ್ಟು ದ್ರಾಕ್ಷಿ, ಟೊಮ್ಯಾಟೋ ಬೆಳೆಯನ್ನು ರೈತ ಬೆಳೆಯುತ್ತಿದ್ದು ಕಳೆದ ಆಗಸ್ಟ್ 6 ರಂದು ಬೆಳಿಗ್ಗೆ 8.30 ರ ಸಮಯದಲ್ಲಿ ಕುಟುಂಬಸ್ಥರದೊಂದಿಗೆ ಜಮೀನಿನ ಬಳಿ ಬಂದಾಗ ಯಾರೋ ಆಸಾಮಿಗಳು ಅಕ್ರಮವಾಗಿ ಪ್ರವೇಶಿಸಿರುವುದು ಗೊತ್ತಾಗಿದೆ. ತೋಟದಲ್ಲಿ ಒಳಗೆ ಹೋಗಿ ನೋಡಿದ ಸಂದರ್ಭದಲ್ಲಿ 600 ಕಲ್ಲು ಕೂಚಗಳ ಪೈಕಿ 80 ಕ್ಕೂ ಹೆಚ್ಚು ಕಲ್ಲು ಕೂಚಗಳನ್ನು ಹೊಡೆದು ಧ್ವಂಸಗೊಳಿಸಿರುವುದು, ಗಿಡಗಳನ್ನು ಕಿತ್ತು ಹಾಕಿರುವುದು ಕಂಡು ಬಂದಿದೆ. ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಭೂ ವಿವಾದ, ಕೌಟುಂಬಿಕ ಕಲಹ, ರಾಜಕೀಯ ಹಿನ್ನೆಲೆ ಸೇರಿದಂತೆ ನಾನಾ ಕಾರಣಗಳಿಂದ ವಿರೋಧಿಗಳು ಕೃಷಿ ಬೆಳೆ ಹಾಳು ಮಾಡುವುದು, ಉಪಕರಣಗಳ ಕಳ್ಳತನ ಸೇರಿದಂತೆ ನಾನಾ ದುಷ್ಕೃತ್ಯ ವೆಸಗುತ್ತಿದ್ದು ಅಮಾಯಕ ಜನರು ತೊಂದರೆ ಅನುಭವಿಸುವಂತಾಗಿದೆ. ಇದರ ಬಗ್ಗೆ ವ್ಯಾಪಕವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ.