

ತುಮಕೂರು: ಸತ್ತು ಹೋಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ(ಇಡಿ)ದ ಮೂಲಕ ಮರುಜೀವ ನೀಡಿ ಕಾಂಗ್ರೆಸ್ ಮುಖಂಡರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ವಿರುದ್ಧ ಇಡಿ ದುರ್ಬಳಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡುವ ಮೂಲಕ ಪಕ್ಷದ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಮಾಜಿ ಸಚಿವ ಅರುಣ್ ಜೇಟ್ಲಿ ಅವಧಿಯಲ್ಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಅದೊಂದು ಸತ್ತು ಹೋಗಿರುವ ಪ್ರಕರಣ. ಆದರೂ ಇಡಿ ಅಸ್ತ್ರ ಬಳಸಿಕೊಂಡು ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಪದೇಪದೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆ ಬರುವಂತೆ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ಗೋದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಮಿತ್ ಷಾ ಗೃಹ ಸಚಿವರಾಗಿದ್ದರು. 2000ಕ್ಕೂ ಹೆಚ್ಚು ಜನರ ಕಗ್ಗೊಲೆ ಮಾಡಲಾಯಿತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಧರ್ಮ ಪಾಲಿಸುವಂತೆ ಎಚ್ಚರಿಸಿದ್ದರು. ಅಲ್ಲದೆ, ರಾಜೀನಾಮೆಯನ್ನು ಬಯಸಿದ್ದರು. ಗೋದ್ರಾ ಹತ್ಯಾಕಾಂಡದ ತನಿಖೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅಮಿತ್ ಷಾ ಅವರನ್ನು 2 ವರ್ಷ ಗಡಿಪಾರು ಮಾಡಿತ್ತು. ಇಂತಹ ಗಂಭೀರ ಪ್ರಕರಣಗಳನ್ನು ತನಿಖೆಗೊಳಪಡಿಸದೆ ಸತ್ತು ಹೋಗಿರುವ ಕೇಸ್ ಕೆದಕುತ್ತಿದ್ದಾರೆ ಎಂದು ದೂರಿದರು.
ಸೀತಾರಾಂ ಸಕ್ರಿಯವಾಗಿಲ್ಲ, ಮುದ್ದಹನುಮೇಗೌಡ ಪಕ್ಷ ಬಿಡಲ್ಲ: ಮಾಜಿ ಶಾಸಕ ಎಂ.ಆರ್.ಸೀತಾರಾಂ ಕೆಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿಲ್ಲ, ಅವರು ಬಿಜೆಪಿಗೆ ಹೋಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಸ್ಫರ್ಧಿಸಿದರೆ ನಮ್ಮದೇನು ಅಡ್ಡಿಯಿಲ್ಲ ಎಂದು ಕೇಂದ್ರ ಮಾಜಿ ಸಚಿವ ಎಂ.ವೀರಪ್ಪಮೋಯ್ಲಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀತಾರಾಂ ಪಕ್ಷ ಬಿಡಬಹುದು. ಆದರೆ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪಕ್ಷ ಬಿಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತನಿಖಾ ಸಂಸ್ಥೆಗಳ ದುರ್ಬಳಕೆ: ಬೆಲೆ ಏರಿಕೆ ತಡೆಗಟ್ಟಬೇಕಾದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ. ಈ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಹರಿಹಾಯ್ದರು. ದೇಶದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ. ಇಡಿ, ಐಟಿಗಳ ಮೂಲಕ ಈ ದೇಶದ ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಮುಗಿಸಲು ಹೊರಟಿದ್ದು, ಮೋದಿಯಂತಹ ನೂರಾರು ಹಿಟ್ಲರ್‌ಗಳು ಬಂದರೂ ಅದು ಸಾಧ್ಯವಿಲ್ಲ. ಈ ರೀತಿ ಪದೇಪದೆ ನೊಟೀಸ್ ಜಾರಿ ಮಾಡಿ, ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವ ಹಿಟ್ಲರ್ ಆಡಳಿತವನ್ನು ಕೊನೆಗಾಣಿಸದೇ ಬಿಡುವುದಿಲ್ಲ ಎಂದು ಶಾಸಕ ವೆಂಕಟರಮಣಪ್ಪ ಗುಡುಗಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ಚಂದ್ರಶೇಖರಗೌಡ, ಹೊನ್ನಗಿರಿಗೌಡ, ಪ್ರಸನ್ನಕುಮಾರ್, ಗೀತಾರುದ್ರೇಶ್, ಗೀತಮ್ಮ, ಸುಜಾತಾ, ಮರಿಚನ್ನಮ್ಮ, ಪಾಲಿಕೆ ಸದಸ್ಯರಾದ ರೂಪಶ್ರೀ, ಪ್ರಭಾವತಿ, ಮಹೇಶ್, ಜಿಲ್ಲಾ ಉಸ್ತುವಾರಿ ಕೇಶವಮೂರ್ತಿ ಪಾಲ್ಗೊಡಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರತಿಕೆಯು ಈ ದೇಶದ ಸ್ವಾತಂತ್ರೃ ಹೋರಾಟದ ಧ್ವನಿಯಾಗಿತ್ತು. ಬ್ರಿಟಿಷರ ಕೈಯಲ್ಲೇ ಇದರ ಧ್ವನಿ ಅಡಗಿಸಲು ಆಗಲಿಲ್ಲ. ಅವರ ಪಳಿಯುಳಿಕೆಗಳಂತಿರುವ ಬಿಜೆಪಿಯವರು ನ್ಯಾಷನಲ್ ಹೆರಾಲ್ಡ್ ಹೆಸರಿನಲ್ಲಿ ಕಾಂಗ್ರೆಸ್ ಕತ್ತು ಹಿಸುಕಲು ಮುಂದಾಗಿದ್ದಾರೆ. ಇದಕ್ಕೆ ಎಂದಿಗೂ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ಮಾಡಿಕೊಡುವುದಿಲ್ಲ .
-ವೀರಪ್ಪ ಮೊಯ್ಲಿ, ಕೇಂದ್ರ ಮಾಜಿ ಸಚಿವ