ಹತಾಶೆಯಿಂದ ಶ್ರೀನಿವಾಸಪ್ರಸಾದ್ ವಿರುದ್ಧ ಸಂಚು

ಹತಾಶೆಯಿಂದ ಶ್ರೀನಿವಾಸಪ್ರಸಾದ್ ವಿರುದ್ಧ ಸಂಚು
Published on

ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಹತಾಶೆಯಿಂದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಕಿವಿಕೊಡದೆ ಪಕ್ಷ ಘೋಷಿಸುವ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲ ಪಡಿಸುವುದೇ ನಮ್ಮ ಗುರಿ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.

ಸೋಮವಾರ ಶರಣ ಸಂಗಮ ಮಠದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭೀಮ ಸದನದಲ್ಲಿ ಆಶ್ರಯ ಪಡೆದಿದ್ದವರೇ ಇಂದು ವಿ.ಶ್ರೀನಿವಾಸಪ್ರಸಾದ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ದಿವಂಗತ ಆರ್.ಧ್ರುವನಾರಾಯಣ ಅವರು ಶ್ರೀನಿವಾಸಪ್ರಸಾದ್ ನನಗೆ ಗುರುವಲ್ಲ, ನಾನು ಅವರ ಶಿಷ್ಯ ಅಲ್ಲ ಎಂದಿದ್ದರ ಪರಿಣಾಮ ಶ್ರೀನಿವಾಸಪ್ರಸಾದ್ ಅವರ ಮುಂದೆ ಅವರಿಗೆ ಸೋಲಾಯಿತು. ಇದೀಗ ಟಿಕೆಟ್ ಕೇಳುತ್ತಿರುವವರಿಗೆ ಸಿಗುವುದು ಅನುಮಾನವಾಗಿರುವುದರಿಂದ ಹತಾಶೆಯಿಂದ ಶ್ರೀನಿವಾಸಪ್ರಸಾದ್ ಅವರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರಿಸಲಿದೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನಮ್ಮ ಗುರಿಯಾಗಿದೆ. ಆ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ ಎಂದರು.

ದಲಿತರಿಗೆ ಅವಮಾನ : ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ.ಶಿವರಾಂ ಅವರ ಅಂತ್ಯಕ್ರಿಯೆಯನ್ನು ಛಲವಾದಿ ಮಹಾಸಭಾ ಬಳಿ ಮಾಡಬೇಕೆಂಬ ಅಭಿಮಾನಿಗಳ ಒತ್ತಾಸೆಗೆ ರಾಜ್ಯ ಸರ್ಕಾರ ಜಾಗ ಕೊಡದೆ ನಿರ್ಲಕ್ಷೃ ತೋರಿದ್ದು, ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹರ್ಷವರ್ಧನ್ ಹರಿಹಾಯ್ದರು.

ಗೌರಿ ಲಂಕೇಶ್, ರಾಮೇಗೌಡ ಅವರಿಗೆಲ್ಲ ಸರ್ಕಾರ ಜಾಗ ಕೊಟ್ಟು ಅಂತ್ಯಸಂಸ್ಕಾರ ಮಾಡಿದೆ. ಐಎಎಸ್ ಅಧಿಕಾರಿಯಾಗಿ, ನಟರಾಗಿ ಹೆಸರುವಾಸಿಯಾಗಿದ್ದ ಕೆ.ಶಿವರಾಂ ಅವರ ಅಂತ್ಯಕ್ರಿಯೆಗೆ ಜಾಗ ಕೊಡದೆ ಸರ್ಕಾರ ನಡೆದುಕೊಂಡ ರೀತಿ ದಲಿತರ ಮೇಲಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಛಲವಾದಿ ಮಹಾಸಭಾಕ್ಕೆ 10 ಎಕರೆ ಜಾಗ ಹಾಗೂ 2 ಕೋಟಿ ರೂ. ಅನುದಾನ ಕೊಟ್ಟಿದ್ದರು. ಸಂವಿಧಾನ ಹಾಗೂ ದಲಿತ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ವಿಷಯದಲ್ಲಿ ಮೌನ ತಳೆದಿರುವುದನ್ನು ನೋಡಿದರೆ ಅವರ ನಿಜವಾದ ದಲಿತ ಪ್ರೇಮ ಏನೆಂಬುದು ತಿಳಿಯುತ್ತದೆ ಎಂದು ಜರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net