ಮೈಸೂರು ಫೆಸ್ಟ್‌ನಲ್ಲಿ 'ಹಾಸ್ಯ ದರ್ಬಾರ್'

13
Published on

ಮೈಸೂರು
ಪ್ರವಾಸೋದ್ಯಮ ಇಲಾಖೆಯಿಂದ ನಗರದ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಮೈಸೂರು ಫೆಸ್ಟ್’ಗೆ ಭಾನುವಾರ ಹಾಸ್ಯೋತ್ಸವದ ಮೂಲಕ ತೆರೆ ಬಿತ್ತು. ವಾರಾಂತ್ಯವಾಗಿದ್ದರಿಂದ ಕಲಾಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಆಗಮಿಸಿ ಕಲಾಸ್ವಾದನೆ ಮಾಡಿದರು.
ಮೈಸೂರು ಹಬ್ಬದ ಕೊನೇ ದಿನವಾದ ಭಾನುವಾರ ಸಂಗೀತ ಕಾರ್ಯಕ್ರಮ, ಹಾಸ್ಯ ದರ್ಬಾರ್, ಸಂಗೀತ ಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನ ಗೆದ್ದಿತು. ತಮ್ಮ ಕಲೆ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಸಾರುತ್ತಿರುವ ಜಾರ್ಜಿಯ ಎಂಬ ಎನ್‌ಜಿಒ ತಂಡ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಮೈಸೂರಿಗೆ ಹೊಸ ಅನುಭವ ನೀಡಿತು. ಮಿನಿ ಫಾಕ್ಸ್, ವತ್ಸಲ್ ಪರಾಶನ್, ಗಯೂಕಿ, ತೆದೋ, ಭಾರತದ ರಾಗಗಳು ಹಾಗೂ ಭಾರತೀಯ ಸಂಗೀತ ಉಪಕರಣಗಳನ್ನು ಬಳಸಿಕೊಂಡು ಸಂಗೀತ ಪ್ರದರ್ಶನ ನೀಡಿದ ಇವರು ತಮ್ಮ ಮೇಲುವಾದ ಕಂಠದಿಂದ ನೆರದಿದ್ದ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಭಾರತದಲ್ಲಿ ನಾವು ಪ್ರದರ್ಶನ ನೀಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಲ್ಲಿ ನಮ್ಮ ಸಂಸ್ಕೃತಿಯನ್ನು ನಿಮ್ಮೆಲ್ಲರಿಗೂ ತಿಳಿಯುವಂತೆ ಮಾಡುವುದು ನಮಗೆ ಸಂತಸ ತಂದಿದೆ ಎಂದು ಗಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.
11 ಜನರಿಂದ ಕೂಡಿದ ನ್ಯೂ ಬಾನ ತಂಡದವರು ಮೊದಲಿಗೆ ಭಾರತದ ರಾಷ್ಟ್ರಗೀತೆ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರೆ, ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ತಮ್ಮ ದೇಶದ ರಾಷ್ಟ್ರಗೀತೆಯನ್ನು ಮೈಸೂರು ಜನತೆಗೆ ಪರಿಚಯಿಸಿದರು. ಇದಾದ ನಂತರದಲ್ಲಿ ವಿಭಿನ್ನ ಸಂಗೀತ ಪ್ರದರ್ಶನ ನೀಡಿ ಜನರ ಮನ ಸೆಳೆಯುವುದರ ಮೂಲಕ ಶಿಳ್ಳೆ ತಮ್ಮದಾಗಿಸಿಕೊಂಡರು.

ಚಲನಚಿತ್ರ ಗಾಯಕ ಸಂತೋಷ್ ವೆಂಕಿ ಲೈವ್ ಇನ್ ಕಾನ್ಸರ್ಟ್ ಮತ್ತು ನೃತ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಎರಡೂ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಹಾಸ್ಯ ದರ್ಬಾರ್, ಗಾಯನ ಮೋಡಿ ಮಾಡಿತು.

ಗಮನ ಸೆಳೆದ ಮೈಸೂರು ಹಬ್ಬ
ಮೈಸೂರು ಹಬ್ಬದ ಮೊದಲ ದಿನ ಆಯೋಜಿಸಿದ್ದ ಚಿತ್ರಸಂತೆ ಚಿತ್ರಕಲಾ ರಸಿಕರನ್ನು ಆಕರ್ಷಿಸಿತು. ಶಾಲಾ, ಕಾಲೇಜುಗಳು ಸೇರಿದಂತೆ ವಿವಿಧೆಡೆಯಿಂದ ವಿವಿಧ ಭಾಗದಿಂದ ಆಗಮಿಸಿದ್ದ ಕಲಾವಿದರು ರಚಿಸಿದ್ದ ವರ್ಣಮಯ ಚಿತ್ರಗಳನ್ನು ನೋಡುಗರು ಕಣ್ತುಂಬಿಕೊಂಡರು. ಅಲ್ಲದೆ, ತಮ್ಮ ನೆಚ್ಚಿನ ಚಿತ್ರಗಳನ್ನು ಖರೀದಿಸಿ ಸಂತಸಪಟ್ಟರು. ಬಯಲು ರಂಗಮಂದಿರದ ಬಳಿ ನಿರ್ಮಿಸಿದ್ದ ಮಾರ್ಕೆಟ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಜತೆಗೆ ಅನೇಕ ಬಗೆಯ ವಸ್ತುಗಳ ಮಾರಾಟ ನಡೆಯಿತು. ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಫ್ಲೀ ಮಾರ್ಕೆಟ್‌ಗೆ ಭೇಟಿ ನೀಡಿ ಬಟ್ಟೆ, ಬ್ಯಾಗ್, ಆಭರಣ, ಅಲಂಕಾರಿಕ ವಸ್ತುಗಳು, ಸಿದ್ಧ ಉಡುಪುಗಳು, ಕೆಎಸ್‌ಐಸಿಯ ರೇಷ್ಮೆ ಸೀರೆಗಳನ್ನು ವೀಕ್ಷಿಸಿದರು. ಜತೆಗೆ, ನಂಜನಗೂಡು ರಸಬಾಳೆ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಹೆಚ್ಚು ಜನ ಜಮಾಯಿಸಿ ನಂಜನಗೂಡು ರಸಬಾಳೆಯನ್ನು ಖರೀದಿಸಿ, ಅದರ ರುಚಿ ಸವಿದರು.
ಫುಡ್‌ಕೋರ್ಟ್‌ನಲ್ಲಿ ಮೇಲುಕೋಟೆ ಪುಳಿಯೋಗರೆ, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ ಸೇರಿದಂತೆ ತರಹೇವಾರಿ ಆಹಾರ, ತಿನಿಸುಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು.
ಇದಿಷ್ಟೇ ಅಲ್ಲದೆ, ಆರಂಭ ದಿನ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತು ತಂಡದಿಂದ ಗಾನ ಮಾಧುರ್ಯಕ್ಕೆ ವಾಯಿಲಿನ ಫ್ಯೂಷನ್, ಚೆಂಡೆ ಜತೆಗೆ ನೃತ್ಯದ ರಂಗು ಸಾಂಸ್ಕೃತಿಕ ವೈಭವದ ರಂಗನ್ನು ಹೆಚ್ಚಿಸಿತು. ಕೇರಳದ ಕೊಚ್ಚಿನ ಉಯಿರೆ ಉಯಿರೆ ಬಿಜಿಎಂ ಚೆಮ್ಮನ್ ಬ್ಯಾಂಡ್ ಕಲಾವಿದರು, ಚಂಡೆ ಮತ್ತು ವಾಯಿಲಿನ್‌ನ ಜುಗಲ್ ಬಂದಿಯೊಂದಿಗೆ ಕನ್ನಡದ ಸುಮಧುರ ಗೀತೆಗಳನ್ನು ಹಾಡಿ ರಂಜಿಸಿದರು.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲ್ಪನೆಯಲ್ಲಿ ಮೈಸೂರು ನಗರ, ಮೈಸೂರಿಗೆ ರಾಜಮನೆತನದ ನಂಟು ಸೇರಿದಂತೆ ಮೈಸೂರಿನ ಚಿತ್ರಣವನ್ನು ಸ್ಥಳದಲ್ಲೇ ಚಿತ್ರಿಸಿ ಹಬ್ಬಕ್ಕೆ ಮೆರುಗು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net