

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾವುದೇ ಸಂದರ್ಭದಲ್ಲೂ ಅವಸರದ ಪ್ರತಿಕ್ರಿಯೆ ಸಂಘರ್ಷಕ್ಕೆ ಎಡೆ ಮಾಡುತ್ತೆ. ನಾಟಕಾರರಾದ ಜಡಭರತ, ಶ್ರೀರಂಗರು, ಬೇಂದ್ರೆ ಮೊದಲಾದವರು ಬರೆದ ನಾಟಕಗಳು ಬಂಡಾಯದ ಪ್ರತಿಕಗಳೇ ಎಂದು ನಟ, ರಂಗಕರ್ಮಿ ಮಂಡ್ಯ ರಮೇಶ ಹೇಳಿದರು.
ನಗರದ ಮನೋಹರ ಗ್ರಂಥ ಮಾಲೆಯ ಅಟ್ಟದಲ್ಲಿ ರಂಗಾಸಕ್ತರೊಂದಿಗೆ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಕದಡಿದ ನೀರು ನಾಟಕದ ಹುಚ್ಚ ರಾಚ್ಯಾ ತಿಳಿವಳಿಕೆಯ ಮಾತುಗಳನ್ನೇ ಹೇಳುತ್ತಾನೆ. ಎಡ ಬಲ ವಿಚಾರಧಾರೆಯ ಅತಿ ರೇಕಗಳೇ ನೈಜ ರಂಗಭೂಮಿಯ ಸೊಗಡನ್ನು ಕುಂದಿಸಿವೆ. ವೃತ್ತಿ ರಂಗಭೂಮಿಯ ವೃತ್ತಿ ಪರತೆ, ಹವ್ಯಾಸಿ ರಂಗಭೂಮಿಯ ವಿಚಾರಪರತೆ, ರೆಪರ್ಟರಿಯ ಶಿಸ್ತು ಇವೆಲ್ಲವೂ ನನ್ನನ್ನು ರಂಗಕಮಿರ್ಯನ್ನಾಗಿಸಿವೆ. ಪ್ರೀತಿ ವಿಶ್ವಾಸದಿಂದ ಯುವ ಪೀಳಿಗೆಯನ್ನು ರಂಗಭೂಮಿಯ ಕಡೆ ಸೆಳೆಯುವ ಮೂಲಕ ನನ್ನ ನಟನ ರಂಗ ರೆಪರ್ಟರಿಯನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಚಲನಚಿತ್ರ, ಕಿರುತೆರೆ ಮೊದಲಾದವುಗಳಲ್ಲಿ ರಂಗಭೂಮಿಯೇ ನನ್ನ ಮೊದಲ ಆದ್ಯತೆ. ಹವ್ಯಾಸಿ ರಂಗಭೂಮಿ ಸಶಕ್ತವಾಗಬೇಕು ಎಂದರು.
ಡಾ. ಶಶಿಧರ ನರೇಂದ್ರ, ಡಾ. ರಮಾಕಾಂತ ಜೋಶಿ, ಪ್ರೊ. ಅರವಿಂದ ಕುಲಕಣಿರ್, ಡಾ. ಕೃಷ್ಣ ಕಟ್ಟಿ, ಹರ್ಷ ಡಂಬಳ, ಸಮೀರ ಜೋಶಿ, ಡಾ. ಬಿ.ಎಂ. ಶರಭೇಂದ್ರಸ್ವಾಮಿ, ಅಶೋಕ ಮೊಕಾಶಿ, ಗಿರೀಶ ದೊಡ್ಡಮನಿ ಇತರರು, ಇದ್ದರು.